ಭಾರತಕ್ಕೆ ಎನ್ಎಸ್ ಜಿ ಸದಸ್ಯತ್ವ: 1962ರಲ್ಲೇ ಅಮೆರಿಕ ಬೆಂಬಲ, ಆದರೆ ನೆಹರು ತಿರಸ್ಕಾರ!

ಜವಾಹರ್ ಲಾಲ್ ನೆಹರು ಅವಧಿಯಲ್ಲೇ ಭಾರತಕ್ಕೆ ಎನ್ಎಸ್ ಜಿ ಸದಸ್ಯತ್ವ ಪಡೆಯುವ ಅವಕಾಶ ಇತ್ತು. ಆದರೆ ಅದನ್ನು ನೆಹರು ತಿರಸ್ಕರಿಸಿದರು ಎಂಬ ಮಾಹಿತಿ ಬಹಿರಂಗವಾಗಿದೆ.
ಜವಾಹರ್ ಲಾಲ್ ನೆಹರು
ಜವಾಹರ್ ಲಾಲ್ ನೆಹರು

ನವದೆಹಲಿ: ವಿಶ್ವಸಂಸ್ಥೆ ಪರಮಾಣು ಪೂರೈಕೆದಾರ ಸಮೂಹ (ಎನ್ಎಸ್ ಜಿ)ಕ್ಕೆ ಸೇರಲು ಜಾಗತಿಕ ಮಟ್ಟದಲ್ಲಿ ಬೆಂಬಲ ಗಳಿಸಲು ಭಾರತ ರಾಜತಾಂತ್ರಿಕ ಯತ್ನ ನಡೆಸುತ್ತಿರಬೇಕಾದರೆ, ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ಅವಧಿಯಲ್ಲೇ ಭಾರತಕ್ಕೆ ಎನ್ಎಸ್ ಜಿ ಸದಸ್ಯತ್ವ ಪಡೆಯುವ ಅವಕಾಶ ಇತ್ತು. ಆದರೆ ಅದನ್ನು ನೆಹರು ತಿರಸ್ಕರಿಸಿದರು ಎಂಬ ಮಾಹಿತಿ ಬಹಿರಂಗವಾಗಿದೆ. 
ಮಾಜಿ ವಿದೇಶಾಂಗ ಕಾರ್ಯದರ್ಶಿ ಮಹಾರಾಜಕೃಷ್ಣ ರಸಗೋತ್ರ ಅವರು ಬರೆದಿರುವ ಪುಸ್ತಕದಲ್ಲಿ ಈ ಕುರಿತ ಮಾಹಿತಿ ಬಹಿರಂಗವಾಗಿದ್ದು 1964 ರಲ್ಲಿ ಚೀನಾಗಿತಂಲೂ ಮುಂಚೆಯೇ ಭಾರತ ಪರಮಾಣು ಪರೀಕ್ಷೆ ನಡೆಸಿ ಅಣು ಸ್ಫೋಟ ನಡೆಸುವುದಕ್ಕೆ ಅವಕಾಶವಿತ್ತು. ಚೀನಾಗಿಂತಲೂ ಮುನ್ನ ಭಾರತ ಪರಮಾಣು ಸಾಧನವನ್ನು ಅಭಿವೃದ್ಧಿಪಡಿಸಿ, ಸ್ಫೋಟಿಸಲು ಅಮೆರಿಕದ ಅಧ್ಯಕ್ಷ ಜಾನ್ ಎಫ್ ಕೆನಡಿ ಆಹ್ವಾನ ನೀಡಿದ್ದರು, ಆದರೆ ಈ ವಿಚಾರವನ್ನು ನೆಹರು ತಿರಸ್ಕರಿಸಿದ್ದರು ಎಂಬ ಮಾಹಿತಿ ಬಹಿರಂಗವಾಗಿದೆ.

ಒಂದು ವೇಳೆ ಅಂದೇ ನೆಹರು ಒಪ್ಪಿಗೆ ನೀಡಿದ್ದರೆ ಭಾರತ ಇಂದು ಎನ್ಎಸ್ ಜಿ ಸೇರುವುದಕ್ಕೆ ಬೆಂಬಲ ಯಾಚಿಸುವ ಪರಿಸ್ಥಿತಿಯೇ ಉಂಟಾಗುತ್ತಿರಲಿಲ್ಲ ಎಂದು ರಸಗೋತ್ರ ತಮ್ಮ ಪುಸ್ತಕದಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಅಮೆರಿಕ ಅಧ್ಯಕ್ಷ ಜಾನ್ ಎಫ್ ಕೆನಡಿ ಆಹ್ವಾನಕ್ಕೆ ನೆಹರು ಒಪ್ಪಿಗೆ ಸೂಚಿಸಿದ್ದರೆ, ಭಾರತ ಚಿನಾಗಿಂತ ಮುಂಚೆ ಏಶ್ಯಾದಲ್ಲೇ ಪ್ರಥಮ ಬಾರಿಗೆ ಪರಮಾಣು ಸಾಧನ ಅಭಿವೃದ್ಧಿ ಪಡಿಸಿ ಪರೀಕ್ಷೆ ನಡೆಸಿದ್ದ ರಾಷ್ಟ್ರವಾಗಿರುತ್ತಿತ್ತು. ಅಷ್ಟೇ ಅಲ್ಲದೇ 1962 ರಲ್ಲಿ ಭಾರತದ ಮೇಲೆ ಚೀನಾ, 1965 ರಲ್ಲಿ ಪಾಕಿಸ್ತಾನ ಸಾರಿದ ಯುದ್ಧಗಳನ್ನೂ ತಡೆಗಟ್ಟಬಹುದಿತ್ತು ಎಂದು ತಮ್ಮ ಪುಸ್ತಕ ಎ ಲೈಫ್ ಇನ್ ಡಿಪ್ಲಾಮೆಸಿ ದ ಬಿಡುಗಡೆ ಸಮಾರಂಭದಲ್ಲಿ ರಸಗೋತ್ರ ತಿಳಿಸಿದ್ದಾರೆ.
ಜಾನ್ ಎಫ್ ಕೆನಡಿ ಭಾರತದ ಪ್ರಜಾಪ್ರಭುತ್ವವನ್ನು ಅತ್ಯಂತವಾಗಿ ಮೆಚ್ಚಿದ್ದರು ಹಾಗೂ ಜವಹಾರ್ ಲಾಲ್ ನೆಹರೂ ಅವರ ಬಗ್ಗೆ ಅತ್ಯಂತ ಗೌರವ ಹೊಂದಿದ್ದರು, ಕಮ್ಯುನಿಷ್ಟ್ ದೇಶವಾದ ಚೀನಾಗಿಂತ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತ ಮೊದಲು ಪರಮಾಣು ಪರೀಕ್ಷೆ ನಡೆಸಬೇಕೆಂಬುದು ಕೆನಡಿ ಆಶಯವಾಗಿತ್ತು, ಆದರೆ ನೆಹರು ಆ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದರು ಎಂದು ಮಹಾರಾಜಕೃಷ್ಣ ರಸಗೋತ್ರ ತಿಳಿಸಿದ್ದಾರೆ.

ರಾಷ್ಟ್ರ ಭದ್ರತೆಗಿಂತ ಪ್ರಮುಖವಾದ ಮತ್ತೊಂದು ವಿಚಾರವಿಲ್ಲ ಎಂದು ಅಮೆರಿಕದ ಪರಮಾಣು ಶಕ್ತಿ ಆಯೋಗದ ಅಧ್ಯಕ್ಷರ ತಾಂತ್ರಿಕ ಟಿಪ್ಪಣಿಯನ್ನೊಳಗೊಂಡ ಪತ್ರವನ್ನು ಬರೆದಿದ್ದ ಜಾನ್ ಎಫ್ ಕೆನಡಿ, ರಾಜಸ್ಥಾನದ ಮರಳುಗಾಡಿನ ಪ್ರದೇಶದಲ್ಲಿ ಅಮೆರಿಕದ ಪರಮಾಣು ಸಾಧನವನ್ನು ಪರೀಕ್ಷೆ ಮಾಡಲು ನೆರವು ನೀಡುವುದಾಗಿ ಭರವಸೆ ನೀಡಿದ್ದರು ಎಂದು ಎ ಲೈಫ್ ಇನ್ ಡಿಪ್ಲಾಮೆಸಿ  ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಅಮೆರಿಕ ಅಧ್ಯಕ್ಷರ ಪ್ರಸ್ತಾವನೆ ಬಗ್ಗೆ ಡಾ.ಹೋಮಿ ಜಹಂಗೀರ್ ಬಾಬ ಹಾಗೂ ಜಿಪಿ ಪಾರ್ಥಸಾರಥಿ ಅವರೊಂದಿಗೆ ಚರ್ಚಿಸಿದ್ದ ನೆಹರು ಪ್ರಸ್ತಾವನೆಯನ್ನು ತಿರಸ್ಕರಿಸಿದ್ದರಂತೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com