

ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಸರ್ಕಾರ ಮುಂದುವರೆಸುವ ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಅವರ ಸೂಚನೆಯನ್ನು ಬಿಜೆಪಿ ಸ್ವಾಗತಿಸಿದೆ.
"ಮುಖ್ಯಮಂತ್ರಿಯಾಗಿದ್ದ ಮುಫ್ತಿ ಮೊಹಮ್ಮದ್ ಸಯೀದ್ ಅವರ ನಿಧನಕ್ಕೂ ಮುನ್ನ ಪಿಡಿಪಿಯೊಂದಿಗೆ ಮೈತ್ರಿ ಸರ್ಕಾರವಿತ್ತು, ಜಮ್ಮು-ಕಾಶ್ಮೀರದ ಅಭಿವೃದ್ಧಿ ದೃಷ್ಟಿಯಿಂದಾಗಿ ಪಿಡಿಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದೆವು, ಇದೇ ನಿಲುವನ್ನು ಈಗಲೂ ಹೊಂದಿದ್ದೇವೆ" ಎಂದು ಬಿಜೆಪಿ ನಾಯಕ ಶಾನವಾಜ್ ಹುಸೇನ್ ಹೇಳಿದ್ದಾರೆ.
ಮೈತ್ರಿ ಸರ್ಕಾರ ಮುಂದುವರೆಸುವುದಕ್ಕೆ ಪಿಡಿಪಿಯಿಂದಲೇ ವಿಳಂಬ ಉಂತಾಗುತ್ತಿತ್ತು. ಯಾವುದೇ ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದು, ರಾಜ್ಯದಲ್ಲಿ ಒಳ್ಳೆಯ ಸರ್ಕಾರ ಇರಬೇಕು ಎಂಬುದು ನಮ್ಮ ಅಭಿಪ್ರಾಯ. ಪಿಡಿಯವರು ಯಾವ ಮಾರ್ಗ ಅನುಸರಿಸುತ್ತಾರೆ ಎಂಬುದು ಅವರು ಯೋಚಿಸಬೇಕಾದ ವಿಚಾರ ಎಂದು ಶಾನವಾಜ್ ಹುಸೇನ್ ತಿಳಿಸಿದ್ದಾರೆ.
ಬಿಜೆಪಿಯೊಂದಿಗೆ ಸರ್ಕಾರ ರಚಿಸಲು ಸಮಸ್ಯೆ ಇಲ್ಲ ರಾಜ್ಯದ ಹಿತಾಸಕ್ತಿಗಾಗಿ ಅಲ್ಲದೇ ಅಧಿಕಾರ ಹಿಡಿದರೆ ಅಂಥಹ ಅಧಿಕಾರದಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಹೇಳಿದ್ದ ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಬಿಜೆಪಿಯೊಂದಿಗೆ ಮೈತ್ರಿ ಸರ್ಕಾರ ಮುಂದುವರೆಸುವ ಸೂಚನೆ ನೀಡಿದ್ದರು.