

ನವದೆಹಲಿ: ಉತ್ತರಾಖಂಡದಲ್ಲಿ ಅಧಿಕಾರಕ್ಕಾಗಿ ತೀವ್ರ ಗುದ್ದಾಟ ನಡೆಯುತ್ತಿರುವುದರ ಮಧ್ಯೆ ಮುಖ್ಯಮಂತ್ರಿ ಹರೀಶ್ ರಾವತ್ ಸೋಮವಾರ ದೆಹಲಿಗೆ ಆಗಮಿಸಿ ಕಾಂಗ್ರೆಸ್ ಮುಖಂಡರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ರಾಜ್ಯದ ಪ್ರಸ್ತುತ ರಾಜಕೀಯ ಪರಿಸ್ಥಿತಿಯನ್ನು ನಾಯಕರಿಗೆ ತಿಳಿಸಿ ಮುಂದೆ ಏನು ಕ್ರಮ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಇದೇ ಸಂದರ್ಭದಲ್ಲಿ ಬಂಡಾಯ ಕಾಂಗ್ರೆಸ್ ಶಾಸಕ ಹರಕ್ ಸಿಂಗ್ ರಾವತ್ ಉತ್ತರಾಖಂಡ ರಾಜ್ಯಪಾಲ ಕೆ.ಕೆ.ಪೌಲ್ ಅವರಿಗೆ ಪತ್ರ ಬರೆದು ವಿಧಾನಸಭೆಯಲ್ಲಿ ಸರ್ಕಾರದ ಬಹುಮತ ಸಾಬೀತುಪಡಿಸಲು ಸದನ ಸಭೆ ಕರೆಯುವಂತೆ ಒತ್ತಾಯಿಸಬೇಕೆಂದು ಕೋರಿದ್ದಾರೆ.
ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಈಗಾಗಲೇ ರಾಜ್ಯಪಾಲರು ಇದೇ 28ರವರೆಗೆ ಕಾಲಾವಕಾಶ ನೀಡಿದ್ದಾರೆ. 9 ಮಂದಿ ಕಾಂಗ್ರೆಸ್ ಶಾಸಕರು ಬಂಡಾಯವೆದ್ದ ಹಿನ್ನೆಲೆಯಲ್ಲಿ ಉತ್ತರಾಖಂಡದಲ್ಲಿ ಹರೀಶ್ ರಾವತ್ ಸರ್ಕಾರಕ್ಕೆ ಸಂಕಷ್ಟ ಎದುರಾಗಿದೆ. 27 ಸದಸ್ಯ ಬಲ ಹೊಂದಿರುವ ಬಿಜೆಪಿ ಸರ್ಕಾರ ರಚಿಸಲು ಪ್ರಯತ್ನಿಸುತ್ತಿದೆ.
ಈ ಮುನ್ನ ಪ್ರತಿಕ್ರಿಯೆ ನೀಡಿದ್ದ ಮುಖ್ಯಮಂತ್ರಿ ಹರೀಶ್ ರಾವತ್, ಎಲ್ಲಕ್ಕಿಂತ ಮುಖ್ಯ ಉತ್ತರಾಖಂಡ ತಮ್ಮ ಆದ್ಯತೆಯಾಗಿದೆ. ಒಂದು ವೇಳೆ ತಮಗೆ ಬಹುಮತ ಸಾಬೀತುಪಡಿಸಲು ಸಾಧ್ಯವಾಗದಿದ್ದರೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದರು.