

ನವದೆಹಲಿ: ಸಂಸತ್ ಅಧಿವೇಶನದಲ್ಲಿ ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣದ ಕುರಿತ ಚರ್ಚೆ ಮುಂದುವರೆದಿದ್ದು, ಮೇ.9 ರ ಕಲಾಪದಲ್ಲಿ ಕಾಂಗ್ರೆಸ್ ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣದ ಕುರಿತು ಪ್ರಧಾನಿ ಸುಳ್ಳು ಪ್ರಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದೆ.
ರಾಜ್ಯಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್, ಪ್ರಧಾನಿ ನರೇಂದ್ರ ಮೋದಿ ಅವರು ಕೇರಳದ ಚುನಾವಣಾ ಪ್ರಚಾರದ ವೇಳೆ ಅಗಸ್ಟಾ ವೆಸ್ಟ್ ಲ್ಯಾಂಡ್ ಪ್ರಕರಣದ ಬಗ್ಗೆ ಪ್ರಸ್ತಾಪಿಸಿದ್ದನ್ನು ವಿರೋಧಿಸಿ, ಹಗರಣದ ವಿಷಯವನ್ನು ಚುನಾವಣಾ ವಿಷಯವನ್ನಾಗಿಸಿಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟು ಮಾಡುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣವನ್ನು ಚುನಾವಣಾ ವಿಷಯವನ್ನಾಗಿಸಿಕೊಂಡಿದ್ದಾರೆ. " ಸಂಸತ್ ನ ಎರಡೂ ಸದನಗಳಲ್ಲಿ ಆಗಸ್ಟಾ ವೆಸ್ಟ್ ಲ್ಯಾಂಡ್ ಹಗರಣದ ಬಗ್ಗೆ ಚರ್ಚೆ ನಡೆಸಲಾಗಿದೆ. ಚರ್ಚೆಯಲ್ಲಿ ಯಾರೂ ಯುಪಿಎ ನಾಯಕರು ಹಣ ಪಡೆದಿರುವುದರ ಬಗ್ಗೆ ಹೇಳಿಕೆ ನೀಡಿಲ್ಲ. ಅಲ್ಲದೇ ಹಗರಣದ ಬಗ್ಗೆ ತನಿಖೆ ನಡೆಸಿರುವ ಇಟಾಲಿಯ ನ್ಯಾಯಾಲಯ ಸಹ ಯುಪಿಎ ನಾಯಕರು ಕಿಕ್ ಬ್ಯಾಕ್ ಪಡೆದಿರುವ ಬಗ್ಗೆ ಹೇಳಿಲ್ಲ. ಈ ಹಗರಣವನ್ನು ಬಿಜೆಪಿ ಕೈಗೆತ್ತಿಕೊಂಡಿರುವುದು ಸಂಸತ್ ನಲ್ಲಿ ಚರ್ಚಿಸಲು ಅಲ್ಲ, ಬದಲಾಗಿ ಅದನ್ನು ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಹಣಿಯಲು ಬಳಸಿಕೊಳ್ಳುತ್ತಿದೆ ಎಂದು ನಾವು ಮೊದಲಿನಿಂದಲೂ ಹೇಳುತ್ತಿದ್ದೇವೆ ಎಂದು ಆಜಾದ್ ಆರೋಪಿಸಿದ್ದಾರೆ.