ಭಾರತಕ್ಕೆ ಇಂಧನ ಉಚಿತ ರವಾನೆ ಸ್ಥಗಿತಗೊಳಿಸಿದ ಇರಾನ್!

ಇರಾನ್ ಮೇಲೆ ವಿಧಿಸಿದ್ದ ದಿಗ್ಬಂಧನವನ್ನು ತೆರವುಗೊಳಿಸಿದ ಬೆನ್ನಲ್ಲೇ ಭಾರತಕ್ಕೆ ಕಚ್ಛಾ ತೈಲದ ಉಚಿತ ರವಾನೆಯನ್ನು ಇರಾನ್ ಸ್ಥಗಿತಗೊಳಿಸಿದೆ...
ಭಾರತೀಯ ತೈಲಗಾರಗಳು (ಸಂಗ್ರಹ ಚಿತ್ರ)
ಭಾರತೀಯ ತೈಲಗಾರಗಳು (ಸಂಗ್ರಹ ಚಿತ್ರ)

ನವದೆಹಲಿ: ಇರಾನ್ ಮೇಲೆ ವಿಧಿಸಿದ್ದ ದಿಗ್ಬಂಧನವನ್ನು ತೆರವುಗೊಳಿಸಿದ ಬೆನ್ನಲ್ಲೇ ಭಾರತಕ್ಕೆ ಕಚ್ಛಾ ತೈಲದ ಉಚಿತ ರವಾನೆಯನ್ನು ಇರಾನ್ ಸ್ಥಗಿತಗೊಳಿಸಿದೆ.

ಭಾರತೀಯ ತೈಲಾಗಾರಗಳ ಶುಕ್ರದೆಸೆ ಮುಕ್ತಾಯವಾಗಿದ್ದು, ಭಾರತಕ್ಕೆ ಕಚ್ಚಾತೈಲವನ್ನು ಉಚಿತ ಸಾಗಣೆ ವೆಚ್ಚದಲ್ಲಿ ರವಾನಿಸುತ್ತಿದ್ದ ಇರಾನ್ ತನ್ನ ನಿರ್ಧಾರವನ್ನು ಇದೀಗ ಬದಲಿಸಿದೆ. ವಿಶ್ವಸಮುದಾಯ ತನ್ನ ಮೇಲೆ ವಿಧಿಸಿದ್ದ ದಿಗ್ಬಂಧನ ಕೊನೆಗೊಳ್ಳುತ್ತಿದ್ದಂತೆಯೇ ಭಾರತಕ್ಕೆ ಉಚಿತ ಸಾಗಣಾ ವೆಚ್ಚದಲ್ಲಿ ಇಂಧನ ಪೂರೈಸುತ್ತಿದ್ದ ಇರಾನ್, ಇದೀಗ ಭಾರತೀಯ ತೈಲಾಗಾರಗಳೇ ಇಂಧನ ಸಾಗಣೆಯ ವ್ಯವಸ್ಥೆ ಮಾಡಿಕೊಳ್ಳಬೇಕು ಅಥವಾ ಸಾಗಣಾ ವೆಚ್ಚವನ್ನು ಭರಿಸಬೇಕು ಎಂದು ಹೇಳಿದೆ.

ಈ ಬಗ್ಗೆ ರಾಜ್ಯಸಭೆಗೆ ಮಾಹಿತಿ ನೀಡಿರುವ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರು, ಲಿಖಿತ ರೂಪದಲ್ಲಿ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ. ಇರಾನ್ ಸರ್ಕಾರ ಭಾರತದ ಎಂಆರ್ ಪಿಎಲ್ ಮತ್ತು ಎಸ್ಸಾರ್ ನಂತರ ತೈಲ ಸಂಸ್ಥೆಗಳಿಗೆ ಉಚಿತ ಸಾಗಣಾ ವೆಚ್ಚದಲ್ಲಿ ಇಂಧನ ರವಾನಿಸುತ್ತಿದ್ದ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದ್ದು, ಭಾರತೀಯ ತೈಲ ಸ್ಕರಣಾಗಾರಗಳಿಗೆ ತಮ್ಮದೇ ಸಾಗಣೆ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಿದೆ ಎಂದು ಹೇಳಿದ್ದಾರೆ.

2013ರ ಫೆಬ್ರುವರಿಯಲ್ಲಿ ಇರಾನ್ ವಿರುದ್ಧ ವಿಶ್ವಸಮುದಾಯ ದಿಗ್ಬಂಧನ ವಿಧಿಸಿದ್ದಾಗ ಭಾರತದೊಂದಿಗೆ ಇರಾನ್ ತೈಲ ಸಂಸ್ಥೆಗಳು ಉಚಿತ ಸಾಗಣಾವೆಚ್ಚದಲ್ಲಿ ಇಂಧನ ಪೂರೈಕೆ ಮಾಡುವುದಾಗಿ ಒಪ್ಪಂದ ಮಾಡಿಕೊಂಡಿದ್ದವು. ಅದರಂತೆ ಮಂಗಳೂರು ತೈಲ ಸಂಸ್ಕರಣಾ ಘಟಕ ಎಂಎರ್ ಪಿಎಲ್ ಮತ್ತು ಎಸ್ಸಾರ್ ಸೇರಿದಂತೆ ದೇಶದ ಇತರೆ ತೈಲ ಸಂಸ್ಥೆಗಳಿಗೆ ಉಚಿತ ಸಾಗಣಾ ವೆಚ್ಚದಲ್ಲಿ ಇಂಧನ ಪೂರೈಕೆ ಮಾಡುತ್ತಿತ್ತು. ಆಗ ರೂಪಾಯಿ ರೂಪದಲ್ಲಿ ಅರ್ಧದಷ್ಟು ಸಾಗಣೆ ವೆಚ್ಚವನ್ನು ಮಾತ್ರ ತೆಗೆದುಕೊಂಡು ಇರಾನ್ ಕಚ್ಚಾ ತೈಲವನ್ನು ಭಾರತಕ್ಕೆ ಒದಗಿಸುತ್ತಿತ್ತು. ಇದು ಭಾರತೀಯ ತೈಲ ಸಂಸ್ಕರಣಾಗಾರಗಳಿಗೆ ವರದಾನವಾಗಿ ಪರಿಣಮಿಸಿತ್ತು. ಆದರೆ ಇದೀಗ ತನ್ನ ವಿರುದ್ಧದ ದಿಗ್ಬಂಧನ ತೆರವಾಗುತ್ತಿದ್ದಂತೆಯೇ ಒಪ್ಪಂದಕ್ಕೆ ತಿಲಾಂಜಲಿ ಹಾಕಿರುವ ಇರಾನ್ ತೈಲ ಸಂಸ್ಥೆಗಳು, ಇಂಧನ ಸಾಗಣೆಗೆ ವ್ಯವಸ್ಥೆ ಮಾಡಿಕೊಳ್ಳುವಂತೆ ಅಥವಾ ಸಾಗಣಾ ವೆಚ್ಚವನ್ನು ಭರಿಸುವಂತೆ ಭಾರತಕ್ಕೆ ಸೂಚಿಸಿದೆ.

ಅಂತೆಯೇ ಇರಾನ್ ನ ನ್ಯಾಷನಲ್ ಇರಾನಿಯನ್ ಆಯಿಲ್ ಕಂಪೆನಿಯು ಎಲ್ಲಾ ಪಾವತಿಗಳನ್ನೂ ಯೂರೋದಲ್ಲಿಯೆ ಮಾಡಬೇಕು ಎಂದು ಸೂಚಿಸಿದೆ. ಇರಾನ್ ನಿರ್ಧಾರದಿಂದಾಗಿ ಕಡಿಮೆ ಸಾಗಣಾ ವೆಚ್ಚದಲ್ಲಿ ಇಂಧನ ಪಡೆಯುತ್ತಿದ್ದ ಎಸ್ಸಾರ್ ಆಯಿಲ್ ಮತ್ತು ಮಂಗಳೂರು ರಿಫೈನರೀಸ್ ಲಿಮಿಟೆಡ್ ಇತ್ಯಾದಿ ಕಂಪೆನಿಗಳು ಇದೀಗ ಇಕ್ಕಟ್ಟಿಗೆ ಸಿಲುಕಿದ್ದು, ಭಾರತೀಯ ತೈಲ ಸಂಸ್ಕರಣಾ ಸಂಸ್ಥೆಗಳು ಏಪ್ರಿಲ್​ನಿಂದ ಬಿಲ್ ಪಾವತಿ ಮಾಡುವುದಷ್ಟೇ ಅಲ್ಲ, 2013ರಿಂದ ಎಲ್ಲಾ ಬಾಕಿ ಹಣವನ್ನೂ ತೀರಿಸಬೇಕಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com