

ಮಧುರೈ: ಗೆದ್ದ ಅಭ್ಯರ್ಥಿಯನ್ನು ಸತ್ತನೆಂದು ಸಾಮಾಜಿಕ ಮಾಧ್ಯಮಗಳಲ್ಲಿ ಘೋಷಣೆ ಮಾಡಿರುವ ಘಟನೆ ನಡೆದಿದೆ.
ಪಾರ್ಶ್ವವಾಯು ಪೀಡಿತರಾಗಿ ಖಾಸಗಿ ಆಸ್ಪತ್ರೆ ಸೇರಿದ ಎಐಎಡಿಎಂಕೆ ಅಭ್ಯರ್ಥಿ ಎಸ್.ಎಂ ಸೀನಿವೇಲ್ ನಿಧನರಾದರೆಂದು ತಮಿಳುನಾಡಿನ ಕೆಲ ಟಿವಿ ಚಾನೆಲ್ ಗಳು ಸುದ್ದಿ ಪ್ರಸಾರ ಮಾಡಿದ್ದವು. ಆದರೆ, ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ಕೊಡಿಸಿದ ನಂತರ ಅವರ ಆರೋಗ್ಯ ಸ್ಥಿರವಾಗಿರುವುದಾಗಿ ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಮತ ಎಣಿಕೆ ಮುಗಿದ ನಂತರ ತಾವು ಜಯ ಗಳಿಸಿರುವ ವಿಷಯ ತಿಳಿಸಿದ ಕೂಡಲೇ ಅವರ ರಕ್ತದೊತ್ತಡ ಅಧಿಕವಾಗಿ, ನಂತರ ಅವರಿಗೆ ಪಾರ್ಶ್ವವಾಯು ಬಡಿಯಿತು ಎಂದು ಸೀನಿವೇಲ್ ಪುತ್ರ ಎಸ್ ಸೆಲ್ಪ ಕುಮಾರ್ ತಿಳಿಸಿದ್ದಾರೆ.
ಇನ್ನೂ ಅವರಿಗೆ ಸಂಪೂರ್ಣ ವಿಶ್ರಾಂತಿ ಅವಶ್ಯಕತೆಯಿದೆ ಎಂದು ವೈದ್ಯರು ಸೂಚಿಸಿದ್ದು, ಪಕ್ಷದ ಯಾವುದೇ ಕಾರ್ಯಕರ್ತರಿಗೂ ಅವರನ್ನು ನೋಡಲು ಬಿಡುತ್ತಿಲ್ಲ ಎಂದು ಹೇಳಿದ್ದಾರೆ.