

ನವದೆಹಲಿ: ಮಾಜಿ ಐಪಿಎಸ್ ಅಧಿಕಾರಿ, ಬಿಜೆಪಿ ನಾಯಕಿ ಕಿರಣ್ ಬೇಡಿ ಅವರನ್ನು ಪುದುಚೆರಿ ಲೆಫ್ಟಿನೆಂಟ್ ಗೌರ್ನರ್ ಹುದ್ದೆಗೆ ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಕೇಂದ್ರ ಸರ್ಕಾರದ ಶಿಫಾರಸ್ಸಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಂಕಿತ ಹಾಕಿದ್ದು, ಕಿರಣ್ ಬೇಡಿ ಪುದುಚೆರಿ ಲೆಫ್ಟಿನೆಂಟ್ ಗೌರ್ನರ್ ಆಗಿ ಅಧಿಕಾರ ವಹಿಸಿಕೊಳ್ಳುವುದು ಅಧಿಕೃತವಾಗಿದೆ. ಕಳೆದ ವರ್ಷ ನಡೆದಿದ್ದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಿರಣ್ ಬೇಡಿ ಬಿಜೆಪಿ ಸೇರಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದರು.
ಕೇಂದ್ರದ ಆಡಳಿತ ನನ್ನ ಮೇಲೆ ನಂಬಿಕೆ ಇರಿಸಿದ್ದು ಅದರಂತೆ ಕಾರ್ಯನಿರ್ವಹಿಸಲಿದ್ದೇನೆ ಎಂದು ಲೆಫ್ಟಿನೆಂಟ್ ಗೌರ್ನರ್ ಹುದ್ದೆಗೆ ನೇಮಕಗೊಂಡಿರುವುದರ ಬಗ್ಗೆ ಕಿರಣ್ ಬೇಡಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ದೇಶದ ಮೊದಲ ಐಪಿಎಸ್ ಅಧಿಕಾರಿಯಾಗಿ ನೇಮಕಗೊಂಡಿದ್ದ ಕಿರಣ್ ಬೇಡಿ, 1998 -99 ರ ಅವಧಿಯಲ್ಲಿ ದೆಹಲಿಯ ಮಾಜಿ ಲೆಫ್ಟಿನೆಂಟ್ ಗೌರ್ನರ್ ತೇಜಿಂದರ್ ಖನ್ನ ಅವರ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಮೇ.19 ರಂದು ಪ್ರಕಟವಾದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಪುದುಚೇರಿಯಲ್ಲಿ ಕಾಂಗ್ರೆಸ್ ಬಹುಮತ ಗಳಿಸಿ ಅಧಿಕಾರ ಹಿಡಿದೆ.