ನವದೆಹಲಿ: ಎನ್ ಡಿಎ ನೇತೃತ್ವದ ಕೇಂದ್ರ ಸರ್ಕಾರ ಎರಡು ವರ್ಷದ ಸಾಧನೆಗಾಗಿ ಕಾರ್ಯಕ್ರಮ ಹಮ್ಮಿಕೊಂಡಿರುವುದರ ವಿರುದ್ಧ ವಾಗ್ಧಾಳಿ ನಡೆಸಿರುವ ಕಾಂಗ್ರೆಸ್ ಎರಡು ವರ್ಷದಲ್ಲಿ ಈ ಸರ್ಕಾರದ ಸಾಧನೆ 'ಬರೀ ಭಾಷಣ, ಇಲ್ಲ ಅನುಷ್ಠಾನ' ಎಂದು ಟೀಕಿಸಿದೆ.
ಹಿರಿಯ ಕಾಂಗ್ರೆಸ್ ನಾಯಕ ನಬಿ ಆಜಾದ್, ಮಲ್ಲಿಕಾರ್ಜುನ್ ಖರ್ಗೆ, ಕಪಿಲ್ ಸಿಬಲ್ ಮತ್ತು ರಣದೀಪ್ ಸುರ್ಜೇವಾಲಾ ಅವರು ಪತ್ರಿಕಾಗೊಷ್ಠಿ ನಡೆಸಿದ್ದು, ಕಳೆದ ಎರಡು ವರ್ಷಗಳಲ್ಲಿ ಬದಲಾವಣೆ ತರಲಾಗಿದೆ ಎಂದು ಹೇಳುವ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಪಿಲ್ ಸಿಬಲ್ ಮಾತನಾಡಿ, ಮೋದಿ ಸರ್ಕಾರ ಏಕೆ ಎರಡು ವರ್ಷಗಳ ಆಚರಣೆಯನ್ನು ಮಾಡಬೇಕು? ಆಚರಣೆ ಮಾಡಲು ಏನಿದೆ? ಉದ್ಯೋಗವನ್ನು ಸೃಷ್ಟಿಸಲಾಗಿದೆಯೇ? ರೈತರು ಶೇ.50ರಷ್ಟು ಆದಾಯ ಗಳಿಸಿದ್ದಾರೆಯೇ, ಈ ದೇಶದಲ್ಲಿ ಸುರಕ್ಷತೆ ಇದೆಯೇ ಎಂದಿದ್ದಾರೆ.
45 ಗಂಟೆಗಳಿಗೊಮ್ಮೆ ಮೋದಿ ಭಾಷಣ ಮಾಡುತ್ತಾರೆ. ಆದರೆ ಒಂದು ಪ್ರಶ್ನೆಗೂ ಉತ್ತರ ನೀಡಿಲ್ಲ ಎಂದ ಅವರು, ಅಭಿವೃದ್ಧಿ ಎಲ್ಲಿದೆ? ಎಂದು ಸಿಬಲ್ ಪ್ರಶ್ನಿಸಿದ್ದಾರೆ.
ನಂತರ ಮಾತನಾಡಿದ ಗುಲಾಮ್ ನಬಿ ಅಜಾದ್, ಮೋದಿ ಸರ್ಕಾರದ ವಿಫಲಗಳನ್ನು ವಿವರಿಸುತ್ತಾ, ಹೂಡಿಕೆ ಕಡಿಮೆ, ಆಹಾರ ಹಣದುಬ್ಬರ, ಕಡಿಮೆ ಉದ್ಯೋಗ ಸೃಷ್ಟಿ. 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿದ್ದರು. ಆದರೆ ಕೇವಲ 1.35 ಲಕ್ಷ ಮಂದಿಗೆ ಮಾತ್ರ ಉದ್ಯೋಗ ನೀಡಲಾಗಿದೆ. ರಫ್ತು ಕೂಡ ವಿಫಲವಾಗಿದೆ. ಪ್ರಮುಖವಾದದ್ದು ಕೃಷಿ ಸಮಸ್ಯೆ. ಆದರೆ ಸರ್ಕಾರ ಮಾತ್ರ ರೈತರಿಗೆ ಯಾವುದೇ ಸಹಾಯ ಮಾಡಿಲ್ಲ. ಅದರಲ್ಲೂ ಬರ ಪೀಡಿತ ಪ್ರದೇಶದ ರೈತರಿಗೆ ನೆರವಿಗೆ ಕೇಂದ್ರ ಸರ್ಕಾರ ಧಾವಿಸಿಲ್ಲ.
ಮೇಕ್ ಇನ್ ಇಂಡಿಯಾ ಸದ್ಯಕ್ಕೆ ವಿಫಲವಾಗಿದೆ. ಗರ್ಜನೆ ಮಾಡುವ ಸಿಂಹ ಈಗ ಬೆಕ್ಕಿನಂತಾಗಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಸರ್ಕಾರದ ಎರಡು ವರ್ಷದ ಸಾಧನೆ ಸುಳ್ಳು ಭರವಸೆಯನ್ನು ನೀಡಿರುವುದು. ಜಾಹಿರಾತುಗಳ ಮೇಲೆಯೇ ಈ ಮೈತ್ರಿಕೂಟ ಸಾಗಿದೆ. ಯುಪಿಎ ಯೋಜನೆಗಳನ್ನು ಹೊಸ ರೂಪದಲ್ಲಿ ಪ್ರಸ್ತುತಪಡಿಸುವುದರಲ್ಲಿ ಈ ಸರ್ಕಾರ ಪ್ರಖ್ಯಾತಿ, ಏಕೆಂದರೆ ಅವರು ಹೊಸ ಯೋಜನೆಗಳನ್ನು ತರುವಲ್ಲಿ ಅಸಮರ್ಥರು ಎಂದಿದ್ದಾರೆ.
ಈ ಸರ್ಕಾರ ದೊಡ್ಡ ಸಾಧನೆಯೆಂದರೆ ಸಾಮಾಜಿಕ ಒತ್ತಡವನ್ನು ಸೃಷ್ಟಿಸಿರುವುದು, ಬಿಜೆಪಿ ನಾಯಕರಿಂದ ಪ್ರಚೋದನೆ, ಅನಗತ್ಯ ವಿವಾದಗಳು, ಗುಂಪು ಘರ್ಷಣೆಗಳು ಎಂದ ಅವರು ಎನ್ ಡಿಎ ಸರ್ಕಾರ ಜನರಲ್ಲಿ ಭೀತಿ ಹುಟ್ಟಿಸಿದೆ. ದಲಿತರು, ಮಹಿಳೆಯರು, ವಿದ್ಯಾರ್ಥಿಗಳು ಭಯದಿಂದ ಬದುಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.