ಅಖಿಲೇಶ್ ಯಾದವ್ ರ ವಿಕಾಸ ರಥ ಯಾತ್ರೆ: ಸಮಾಜವಾದಿ ಪಕ್ಷದ ಏಕತೆ ಸಾರಿದ ಮುಲಾಯಂ, ಶಿವಪಾಲ್

ಇತ್ತೀಚೆಗೆ ಆಂತರಿಕ ಕಲಹದಿಂದ ಸುದ್ದಿಯಾಗಿದ್ದ ಸಮಾಜವಾದಿ ಪಕ್ಷದೊಳಗೆ ಒಗ್ಗಟ್ಟು ಇದೆ ಎಂದು ರಾಜ್ಯದ...
ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಮತ್ತು ಶಿವಪಾಲ್ ಯಾದವ್ ವೇದಿಕೆಯಲ್ಲಿ ಒಟ್ಟಿಗೆ ಕುಳಿತಿರುವುದು.
ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಮತ್ತು ಶಿವಪಾಲ್ ಯಾದವ್ ವೇದಿಕೆಯಲ್ಲಿ ಒಟ್ಟಿಗೆ ಕುಳಿತಿರುವುದು.
Updated on: 
ಲಕ್ನೋ: ಇತ್ತೀಚೆಗೆ ಆಂತರಿಕ ಕಲಹದಿಂದ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದ ಸಮಾಜವಾದಿ ಪಕ್ಷದೊಳಗೆ ಒಗ್ಗಟ್ಟು ಇದೆ ಎಂದು ರಾಜ್ಯದ ಜನತೆಗೆ ಸಾರಲು ಮುಖ್ಯಮಂತ್ರಿ ಅಖಿಲೇಶ್ ಯಾದವ್ ನೇತೃತ್ವದಲ್ಲಿ ಇಂದು ವಿಕಾಸ ರಥ ಯಾತ್ರೆ ಆರಂಭಗೊಂಡಿದ್ದು, ಅದಕ್ಕೆ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಚಾಲನೆ ನೀಡಿದರು. ಅವರ ಜೊತೆ ಪಕ್ಷದ ರಾಜ್ಯಾಧ್ಯಕ್ಷ ಶಿವಪಾಲ್ ಯಾದವ್ ಕೂಡ ಇದ್ದರು.
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಬೆರಳೆಣಿಕೆ ತಿಂಗಳುಗಳಷ್ಟೇ ಬಾಕಿ ಉಳಿದಿರುವ ಸಂದರ್ಭದಲ್ಲಿ ಸಮಾಜವಾದಿ ಪಕ್ಷದ ಈ ರಥ ಯಾತ್ರೆ ಬಹಳ ಮಹತ್ವ ಪಡೆದಿದೆ. 
ಲಕ್ನೋ ನಗರದ ಲಾ ಮಾರ್ಟಿನಿರಿ ಮೈದಾನದಲ್ಲಿ ಬಂದಿಳಿದ ಅಖಿಲೇಶ್, ಮುಲಾಯ ಸಿಂಗ್ ಮತ್ತು ಶಿವಪಾಲ್ ಯಾದವ್ ವಿಕಾಸ ರಥ ಯಾತ್ರೆಗೆ ಚಾಲನೆ ನೀಡಿದರು.
ವಾರಗಳ ಹಿಂದೆ ಮುಖ್ಯಮಂತ್ರಿ ಅಖಿಲೇಶ್ ವಿರುದ್ಧ ತಿರುಗಿ ನಿಂತಿದ್ದ ಅವರ ಚಿಕ್ಕಪ್ಪ ಶಿವಪಾಲ್, ಅಖಿಲೇಶ್ ಅವರಿಗೆ ಶುಭಕಾಮನೆಗಳನ್ನು ತಿಳಿಸುತ್ತೇನೆ. ವಿಕಾಸದಿಂದ ವಿಜಯದ ಯಾತ್ರೆ ಇದಾಗಿದೆ. ನಮ್ಮ ಗುರಿ 2017ರ ಮುಖ್ಯ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯುವುದಾಗಿದೆ ಎಂದು ಹೇಳಿದರು.
2012ರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಅಖಿಲೇಶ್ ಯಾದವ್ ಪ್ರಮಾಣ ವಚನ ಸ್ವೀಕರಿಸಿದ ಸ್ಥಳದಲ್ಲಿಯೇ ಇಂದು ವಿಕಾಸ ರಥ ಯಾತ್ರೆಯನ್ನು ಆರಂಭಿಸಲಾಯಿತು. 
ಇಂದಿನ ಯಾತ್ರೆಯಲ್ಲಿ ಯುವಕರು ಬಹಳ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ಬೆಳಗ್ಗೆಯಿಂದಲೇ ಅಖಿಲೇಶ್, ಮುಲಾಯಂ ಸಿಂಗ್ ಯಾದವ್, ಶಿವಪಾಲ್ ಅವರ ಭಾವಚಿತ್ರಗಳನ್ನು ಹೊತ್ತ ಭಿತ್ತಿಪತ್ರಗಳು, ಹೋರ್ಡಿಂಗ್ಸ್ ಗಳನ್ನು ಹೊತ್ತು ಸಾಗುತ್ತಿದ್ದಾರೆ.
ಕೆಲವರು ಅಖಿಲೇಶ್ ಅವರಿದ್ದ ಸ್ಥಳಕ್ಕೆ ಮುನ್ನುಗ್ಗಲು ಯತ್ನಿಸಿದರು. ಆಗ ಶಿವಪಾಲ್ ಯಾದವ್ ಉತ್ಸಾಹದಲ್ಲಿ ನಿಮ್ಮ ತಾಳ್ಮೆಯನ್ನು ಕಳೆದುಕೊಳ್ಳಬೇಡಿ ಎಂದು ಸಲಹೆ ನೀಡಿದರು.
ರಥ ಯಾತ್ರೆಗೆ ಚಾಲನೆ ನೀಡುವುದಕ್ಕೂ ಮುನ್ನ ರಾಮ್ ಗೋಪಾಲ್ ಯಾದವ್ ಅವರ ಪುತ್ರ ಮತ್ತು ಸಂಸದ ಅಕ್ಷಯ್ ಯಾದವ್ ಮಾತನಾಡಿ, ಜನರು ಅಖಿಲೇಶ್ ಯಾದವ್ ಅವರಿಗೆ ಮತ ಹಾಕುತ್ತಾರೆ. ಸಮಾಜವಾದಿ ಪಕ್ಷ ಅವರ ಹೆಸರಿನಲ್ಲಿ ಸ್ಪರ್ಧಿಸಿ ಚುನಾವಣೆಯಲ್ಲಿ ಗೆಲ್ಲಲಿದೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com