ನವದೆಹಲಿ: ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ವಾಯು ಮಾನಿಲ್ಯ ನಿಯಂತ್ರಿಸಲು 48 ಗಂಟೆಗಳಲ್ಲಿ ಕನಿಷ್ಠ ಸಾಮಾನ್ಯ ಕಾರ್ಯಕ್ರಮ ರೂಪಿಸುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಪರಿಸರ ಮಾಲಿನ್ಯ ನಿಯಂತ್ರಣ ಪ್ರಾಧಿಕಾರ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಟಿಎಸ್ ಥಾಕೂರ್ ನೇತೃತ್ವದ ಪೀಠ, ರಾಷ್ಟ್ರರಾಜಧಾನಿಯಲ್ಲಿ ಮಿತಿಮೀರಿದ ವಾಯು ಮಾಲಿನ್ಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ.
ಇದೊಂದು ಸಾರ್ವಜನಿಕ ಆರೋಗ್ಯದ ತುರ್ತು ಪರಿಸ್ಥಿತಿ ಎಂದಿರುವ ಕೋರ್ಟ್, ವಾಯು ಮಾಲಿನ್ಯ ನಿಯಂತ್ರಿಸಲು ಎರಡು ದಿನಗಳಲ್ಲಿ ಕನಿಷ್ಠ ಸಾಮಾನ್ಯ ಕಾರ್ಯಕ್ರಮ ರೂಪಿಸಿ, ಅದನ್ನು ತನಗೆ ಸಲ್ಲಿಸುವಂತೆ ಆದೇಶಿಸಿ, ವಿಚಾರಣೆಯನ್ನು ನವೆಂಬರ್ 10ಕ್ಕೆ ಮುಂದೂಡಿದೆ.
ಇದಕ್ಕೂ ಮುನ್ನ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ವಾಯು ಮಾಲಿನ್ಯ ನಿಯಂತ್ರಿಸಲು ಹೆಲಿಕಾಪ್ಟರ್ ಮೂಲಕ ಮಳೆ ಸುರಿಸುವಂತೆ ದೆಹಲಿ ಹಾಗೂ ನೆರೆಯ ರಾಜ್ಯಗಳಿಗೆ ಸೂಚಿಸಿತ್ತು. ಅಲ್ಲದೆ ರಾಷ್ಟ್ರ ರಾಜಧಾನಿಯಲ್ಲಿ ಒಂದು ವಾರಗಳ ಕಾಲ ನಿರ್ಮಾಣ ಕಾಮಗಾರಿಗಳಿಗೆ ನಿಷೇಧ ಹೇರಿದೆ.