ಕಾಲು ಕೆರೆಯುವ ಶತ್ರು ರಾಷ್ಟ್ರಕ್ಕೆ ಪಾಠ ಕಲಿಸಲು ಸೇನೆ ಹಾತೊರೆಯುತ್ತಿದೆ: ಪರಿಕ್ಕರ್

ಗಡಿಯಲ್ಲಿ ಕಾಲು ಕೆರೆದು ಅಪ್ರಚೋದಿತ ದಾಳಿ ನಡೆಸುತ್ತಿರುವ ಶತ್ರು ರಾಷ್ಟ್ರಕ್ಕೆ ಪಾಠ ಕಲಿಸಲು ಭಾರತೀಯ ಸೇನೆ ಹಾತೊರೆಯುತ್ತಿದೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು...
ರಕ್ಷಣಾ ಸಚಿವ ಮನೋಹರ್ ಪರಿಕ್ಕರ್
ರಕ್ಷಣಾ ಸಚಿವ ಮನೋಹರ್ ಪರಿಕ್ಕರ್

ಪಣಜಿ: ಗಡಿಯಲ್ಲಿ ಕಾಲು ಕೆರೆದು ಅಪ್ರಚೋದಿತ ದಾಳಿ ನಡೆಸುತ್ತಿರುವ ಶತ್ರು ರಾಷ್ಟ್ರಕ್ಕೆ ಪಾಠ ಕಲಿಸಲು ಭಾರತೀಯ ಸೇನೆ ಹಾತೊರೆಯುತ್ತಿದೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಸೋಮವಾರ ಹೇಳಿದ್ದಾರೆ.

ಪಣಜಿಯಲ್ಲಿ ಬಿಜೆಪಿ ಆಯೋಜಿಸಿರುವ ಪ್ರಚಾರ ಸಭೆಯೊಂದರಲ್ಲಿ ಮಾತನಾಡಿರುವ ಅವರು, ಗಡಿಯಲ್ಲಿ ಪಾಕಿಸ್ತಾನ ಸೇನೆ ಭಾರತೀಯ ಸೇನೆಯನ್ನು ಗುರಿಯಾಗಿಸಿಟ್ಟುಕೊಂಡು ಅಪ್ರಚೋದಿತ ದಾಳಿ ನಡೆಸುತ್ತಿದ್ದು, ಶತ್ರು ರಾಷ್ಟ್ರಕ್ಕೆ ಸರಿಯಾದ ಪಾಠ ಕಲಿಸಲು ಸರ್ಕಾರದ ಆದೇಶಕ್ಕಾಗಿ ಕಾದು ಕುಳಿತಿದೆ. ಈ ಹಿಂದೆ ನಾವು ಸೇನೆಗೆ 2-3 ಬಾರಿ ಅನುಮತಿ ನೀಡಿದ್ದೆವು ಎಂದು ಹೇಳಿದ್ದಾರೆ. 

ನಮ್ಮನ್ನು ಗುರಾಯಿಸಿದರೆ, ನಾವೂ ದೊಡ್ಡ ಕಣ್ಣುಗಳ ಮೂಲಕ ಅವರನ್ನು ಗುರಾಯಿಸುತ್ತೇವೆಂಬುದನ್ನು ಶತ್ರು ರಾಷ್ಟ್ರ ತಿಳಿಯಬೇಕಿದೆ. ರಾಷ್ಟ್ರದ ಗಡಿಯಲ್ಲಿ ಸುರಕ್ಷಿತವಾಗಿದ್ದು, ಭಾರತದ ಮೇಲೆ ಯಾರೂ ದಾಳಿ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಇದೇ ವೇಳೆ ವಿರೋಧ ಪಕ್ಷ ಕಾಂಗ್ರೆಸ್ ಪಕ್ಷಕ್ಕೆ ಪರೋಕ್ಷವಾಗಿ ದಾಳಿ ಮಾಡಿರುವ ಅವರು, ದೇಶದ ರಕ್ಷಣೆಗೆ ನಾವು ಬದ್ಧರಾಗಿದ್ದೇವೆ. ಮೋದಿ ಸರ್ಕಾರ ಅಧಿಕಾರಕ್ಕೆ ಬರುವವರೆಗೂ ಕಳೆದ 30 ವರ್ಷಗಳಿಂದ ಸೇನೆಗೆ ಹೊಸ ಫಿರಂಗಿ ಗನ್ ಗಳು ದೊರಕಿರಲಿಲ್ಲ. ಇದೀಗ ಸೇನೆಗೆ ಹೊರ ಫಿರಂಗಿ ಗನ್ ಗಳು ದೊರಕಿದೆ ಎಂದಿದ್ದಾರೆ.

ನೋಟು ನಿಷೇಧ ಕುರಿತಂತೆ ಮಾತನಾಡಿರುವ ಅವರು, ದೇಶದ ಆರ್ಥಿಕ ಭದ್ರತೆಯೆಡೆಗೂ ಸರ್ಕಾರ ಪ್ರಾಮುಖ್ಯತೆಯನ್ನು ಕೊಟ್ಟಿದ್ದು, ದುಬಾರಿ ನೋಟಿನ ಮೇಲೆ ನಿಷೇಧ ಹೇರುವ ಮೂಲಕ ದಿಟ್ಟ ಹೆಜ್ಜೆಯನ್ನು ಇಟ್ಟಿದೆ. ರು. 500 ಹಾಗೂ 1,000 ನೋಟುಗಳ ಮೇಲೆ ನಿಷೇಧ ಹೇರುವ ಮೂಲಕ ಕಪ್ಪು ಹಣದ ವಿರುದ್ಧ ಕ್ರಮ ಕೈಗೊಂಡಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com