ಬಾಲಮುರಳಿ ಕೃಷ್ಣ ಅವರು ಜನಿಸಿದ್ದು, 1930 ರ ಜುಲೈ 6 ರಂದು ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಸಂಕರ ಗುಪ್ತ ಎಂಬ ಗ್ರಾಮದಲ್ಲಿ. ತಂದೆ, 'ಪಟ್ಟಾಭಿರಾಮಯ್ಯ', ಕೊಳಲು, ವೀಣೆ ಪಿಟೀಲು ವಾದಕ. ತಾಯಿ ಸೂರ್ಯಕಾಂತಮ್ಮ ವೀಣಾವಾದಕಿ. ಪೋಷಕರು ನಾಮಕರಣ ಮಾಡಿದ್ದು ಮುರಳಿ ಕೃಷ್ಣ ಎಂದು. ಆದರೆ ಬಾಲಮುರಳಿ ಕೃಷ್ಣ ಅವರ ಊರಿನಲ್ಲಿದ್ದ ಹರಿಕಥಾ ವಿದ್ವಾನ್ ಸತ್ಯನಾರಾಯಣ ಅವರು ಬಾಲಮುರಳಿಕೃಷ್ಣ ಎಂದು ಹೆಸರನ್ನು ನೀಡುತ್ತಾರೆ. ಬಾಲ್ಯದಿಂದಲೇ ಮನೆಯಲ್ಲಿ ಸಂಗೀತಮಯ ವಾತಾವರಣ ಹೊಂದಿದ್ದ ಬಾಲಮುರಳಿಕೃಷ್ಣ ಅವರು 15 ನೇ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡರು, ನಂತರ ಬೆಳೆದಿದ್ದು ವಿಜಯವಾಡದಲ್ಲಿರುವ ಸೋದರತ್ತೆಯ ಮನೆಯಲ್ಲಿ. ಬಾಲಮುರಳಿಕೃಷ್ಣ ಅವರಿಗೆ ತಂದೆ ಪಟ್ಟಾಭಿರಾಮಯ್ಯನವರೇ ಮೊದಲ ಗುರುಗಳು. ನಂತರ ಸುಸರ್ಲ ದಕ್ಷಿಣಾಮೂರ್ತಿಗಳ ಬಳಿ ಶಿಕ್ಷಣ ಪಡೆದ ಅವರು ಕೆಲವೇ ವರ್ಷಗಳಲ್ಲಿ 72 ಬಗೆಯ ರಾಗಗಳನ್ನು ಹೆಣೆದರು. 1960 ರ ವೇಳೆಗೆ ವಿಜಯವಾಡ ರೇಡಿಯೋ ಕೇಂದ್ರದ, ಬೆಳಗಿನ ಕಾರ್ಯಕ್ರಮದಲ್ಲಿ 'ಭಕ್ತಿರಂಜಿನಿ,' ಎಂಬ 'ಗೀತಮಾಲೆ'ಯನ್ನು ಪ್ರಾರಂಭಿಸಿ, ಅತ್ಯಂತ ಜನಪ್ರಿಯರಾದರು.