

ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮೂರುವರೆ ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ನಡೆಸಿ, ಗುಂಡಿಯಲ್ಲಿ ಬಿಸಾಡಿರುವ ಘಟನೆ ನಡೆದಿದೆ.ದೆಹಲಿಯ ಸರಾಯ್ ರೋಹಿಲಾ ಎಂಬ ಪ್ರದೇಶದಲ್ಲಿ ಈ ಕೃತ್ಯ ನಡೆದಿದ್ದು, 35 ವರ್ಷದ ಬೀರ್ ಬಲ್ ಎಂಬಾತನನ್ನು ಬಂಧಿಸಲಾಗಿದೆ.
ನವೆಂಬರ್ 21 ರ ಬೆಳಗ್ಗೆ ತನ್ನ ಅಕ್ಕನ ಜೊತೆ ಆಟಾವಾಡುತ್ತಿದ್ದ ಬಾಲಕಿಗೆ ಚಾಕಲೇಟ್ ಕೊಟ್ಟು, ಬಾಲಕಿಯ ಅಕ್ಕನನ್ನು ಬೇರೆಡೆ ಕಳುಹಿಸಿ ಆಕೆಯನ್ನು ಕರೆದೊಯ್ದಿದ್ದಾನೆ. ಮದ್ಯದ ಅಮಲಿನಲ್ಲಿದ್ದ ಆತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದಾನೆ, ಆಘಾತಗೊಂಡ ಬಾಲಕಿ ಪ್ರಜ್ಞಾಹೀನಳಾಗಿ ಬಿದ್ದದ್ದನ್ನು ನೋಡಿ ಸತ್ತಿದ್ದಾಳೆಂದು ಬಾವಿಸಿದ ಆತ ಬಾಲಕಿಯನ್ನು ಸಮೀಪದ ಗುಂಡಿಯೊಂದರಲ್ಲಿ ಬಿಸಾಡಿ ಹೊರಟಿದ್ದಾನೆ.
ಬಾಲಕಿ ನಾಪತ್ತೆ ಸಂಬಂಧ ಆಕೆಯ ಪೋಷಕರು ದೂರು ದಾಖಲಿಸಿದ್ದಾರೆ. ಬಾಲಕಿ ಸಹೋದರಿ ನೀಡಿದ ಹೇಳಿಕೆ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ, ಗುಂಡಿಯಲ್ಲಿ ಬಿದ್ದಿದ್ದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.