ಮೋದಿ ಕ್ಷಮೆಗೆ ಪ್ರತಿಪಕ್ಷಗಳ ಪಟ್ಟು: ಲೋಕಸಭಾ ಕಲಾಪ ಸೋಮವಾರಕ್ಕೆ ಮುಂದೂಡಿಕೆ

ಅಧಿವೇಶನ ಆರಂಭವಾದಾಗಿನಿಂದಲೂ ನೋಟು ನಿಷೇಧ ಕುರಿತಂತೆ ಲೋಕಸಭಾ ಕಲಾಪದಲ್ಲಿ ಗದ್ದಲವನ್ನುಂಟು ಮಾಡುತ್ತಲೇ ಬಂದಿರುವ ಪ್ರತಿಪಕ್ಷಗಳೂ 7 ದಿನದ ಕಲಾಪದಲ್ಲೂ ಕೂಡ ತೀವ್ರ ಗದ್ದಲವನ್ನುಂಟು ಮಾಡಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರ...
ಲೋಕಸಭೆ
ಲೋಕಸಭೆ
Updated on: 

ನವದೆಹಲಿ: ಅಧಿವೇಶನ ಆರಂಭವಾದಾಗಿನಿಂದಲೂ ನೋಟು ನಿಷೇಧ ಕುರಿತಂತೆ ಲೋಕಸಭಾ ಕಲಾಪದಲ್ಲಿ ಗದ್ದಲವನ್ನುಂಟು ಮಾಡುತ್ತಲೇ ಬಂದಿರುವ ಪ್ರತಿಪಕ್ಷಗಳೂ 7 ದಿನದ ಕಲಾಪದಲ್ಲೂ ಕೂಡ ತೀವ್ರ ಗದ್ದಲವನ್ನುಂಟು ಮಾಡಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ತೀವ್ರವಾಗಿ ಪ್ರತಿಭಟನೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಗಿದೆ.
    
ಕಲಾಪ ಆರಂಭವಾಗುತ್ತಿದ್ದಂತೆ ನೋಟು ನಿಷೇಧ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಂಸತ್ತಿಗೆ ಹಾಜರಾಗಬೇಕೆಂದು ಪಟ್ಟು ಹಿಡಿದವು. ಮೋದಿ ಹಾಜರಾಗದಿದ್ದರೆ ಕಲಾಪ ನಡೆಯಲು ಬಿಡುವುದಿಲ್ಲ ಎಂದು ಹೇಳಿದವು. ಈ ಹಿನ್ನೆಲೆಯಲ್ಲಿ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಲಾಗಿತ್ತು.

ಈ ಮಧ್ಯೆ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನೋಟು ನಿಷೇಧವನ್ನು ಟೀಕಿಸುತ್ತಿರುವವರಿಗೆ ಸರ್ಕಾರ ಒಳ್ಳೆಯ ನಿರ್ಧಾರದ ಬಗ್ಗೆ ಸಮಸ್ಯೆಯಿಲ್ಲ. ಆದರೆ, ಅವರಿಗೆ ತಯಾರಾಗಲು ಸಮಯ ನೀಡಿಲಿಲ್ಲ ಎನ್ನುವುದೇ ಅವರ ದೊಡ್ಡ ಸಮಸ್ಯೆಯಾಗಿದೆ. ಕೇಂದ್ರ ಸರ್ಕಾರದ ನೋಟು ನಿಷೇಧ ನಡೆಯನ್ನು ವಿರೋಧ ಪಕ್ಷಗಳು ಟೀಕಿಸುತ್ತಿದ್ದು, ವಿರೋಧ ವ್ಯಕ್ತಪಡಿಸುತ್ತಿರುವವರು ತಾವು ಎಲ್ಲಿ ಸಿಕ್ಕಿ ಬೀಳುತ್ತೇವೆಯೋ ಎಂಬ ಭಯದಲ್ಲಿ ಗೊಂದಲಕ್ಕೀಡಾಗಿದ್ದಾರೆಂದು ಹೇಳಿದ್ದರು.

ಈ ಹೇಳಿಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಪ್ರತಿಪಕ್ಷಗಳು ಪ್ರಧಾನಮಂತ್ರಿ ಮೋದಿಯವರು ತಮ್ಮ ಹೇಳಿಕೆ ಕುರಿತಂತೆ ಕೂಡಲೇ ಕ್ಷಮೆಯಾಚಿಸುವಂತೆ ಪಟ್ಟು ಹಿಡಿದವು. ಅಲ್ಲದೆ, ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಲು ಆರಂಭಿಸಿದವು, ಪ್ರಧಾನಿ ಮೋದಿಯವದು ಸಂಸತ್ತು ಕಲಾಪಕ್ಕೆ ಹಾಜರಾಗಿ ಹೇಳಿಕೆಯನ್ನು ನೀಡಬೇಕೆ ವಿನಃ ಸಂಸತ್ತಿನ ಹೊರಗೆ ನಿಂತು ಹೇಳಿಕೆ ನೀಡುವುದಲ್ಲ ಎಂದು ಘೋಷಣೆಗಳನ್ನು ಕೂಗಲು ಆರಂಭಿಸಿದ್ದವು.

ಈ ವೇಳೆ ಮಾತನಾಡಿದ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಸಂವಿಧಾನ ದಿನಾಚರಣೆ ಇರುವುದು ನಾಳೆ ಹಾಗೂ ಮುಂಬೈ ಉಗ್ರರ ದಾಳಿ ದಿನವನ್ನು ನಾಳೆ ನೆನೆಯಲಾಗುತ್ತದೆ ಎಂದು ಹೇಳಿದರು.

ನಂತರ ಮಾತನಾಡಿದ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ಕಾಲಾವಕಾಶ ಸಿಗದಿದ್ದ ಕಾರಣಕ್ಕೆ ವಿರೋಧ ಪಕ್ಷಗಳು ನನ್ನ ಮೇಲೆ ದಾಳಿ ನಡೆಸುತ್ತಿದೆ ಎಂದು ಮೋದಿಯವರು ಹೇಳಿದ್ದಾರೆ. ಕಲಾಪವನ್ನು ಮುಂದೂಡಬೇಕು ಎಂದು ನಾವು ಆಗ್ರಹಿಸುತ್ತಿಲ್ಲ. ಮೋದಿಯವರ ಹೇಳಿಕೆ ವಿರುದ್ಧ ಪ್ರತಿಭಟಿಸುತ್ತಿದ್ದೇವೆ. ವಿರೋಧ ಪಕ್ಷಗಳು ಕಪ್ಪುಹಣದ ಪರವಾಗಿವೆ ಎಂದು ಮೋದಿಯವರು ಹೇಳಿದ್ದಾರೆ. ಈ ಹೇಳಿಕೆ ನಾವು ವಿರೋಧ ವ್ಯಕ್ತಪಡಿಸುತ್ತಿದ್ದೇವೆಂದು ಹೇಳಿದ್ದರು.

ಈ ಮಧ್ಯೆಯೇ ಪ್ರತಿಪಕ್ಷಗಳ ನಾಯಕರು ಸದನದ ಬಾವಿಗಿಳಿದು ಪ್ರತಿಭಟಿಸಲು ಆರಂಭಿಸಿದರು. ಅಲ್ಲದೆ, ಮೋದಿ ವಿರುದ್ಧ ಘೋಷಣಾ ವಾಕ್ಯಗಳನ್ನೂ ಕೂಗಲು ಆರಂಭಿಸಿದರು. ಪ್ರಧಾನಮಂತ್ರಿಗಳು ಸದನಕ್ಕ ಬರಲಿ...ಧೈರ್ಯವಿದ್ದರೆ ಸದನದಲ್ಲೇ ಈ ಹೇಳಿಕೆಯನ್ನು ನೀಡಿ... ಎಂದು ಘೋಷಣಾ ವಾಕ್ಯಗಳನ್ನು ಕೂಗಿದರು.

ವಿರೋಧ ಪಕ್ಷಗಳ ಈ ನಡೆದೆ ತೀವ್ರವಾಗಿ ಕೆಂಡಾಮಂಡಲವಾದ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು, ಕಲಾಪ ನಡೆಯಲು ವಿರೋಧ ಪಕ್ಷಗಳು ಸಹಾಯ ಮಾಡುತ್ತಿಲ್ಲ. ಹೀಗಾಗಿ ಕಲಾಪವನ್ನು ಸೋಮವಾರಕ್ಕೆ ಮುಂದೂಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com