

ನವದೆಹಲಿ: ನೋಟು ನಿಷೇಧ ಕ್ರಮದಿಂದ ಎದುರಾಗಿರುವ ಆರ್ಥಿಕ ಬಿಕ್ಕಟ್ಟಿನ ಬೆನ್ನಲ್ಲೇ ಬಿಡುಗಡೆಯಾಗಿರುವ ಹೊಸ 500ರು. ಮುಖಬೆಲೆಯ ನೋಟುಗಳು ತನ್ನ ಮುದ್ರಣ ದೋಷದಿಂದಾಗಿ ಹಲವು ಗೊಂದಲಗಳಿಗೆ ಕಾರಣವಾಗಿದ್ದು, ಇದು ಅಸಲಿಯೋ ನಕಲಿಯೋ ಎನ್ನುವಷ್ಟರ ಮಟ್ಟಿಗೆ ಜನ ಹೊಸ ನೋಟನ್ನು ಶಂಕೆಯಿಂದ ನೋಡುತ್ತಿದ್ದಾರೆ.
ಈಗಾಗಲೇ ದೇಶಾದ್ಯಂತ ಹೊಸ 500ರು. ಮುಖಬೆಲೆಯ ನೋಟುಗಳು ಹಂಚಿಕೆಯಾಗಿದ್ದು, ಈ ಪೈಕಿ ಹಲವು ನೋಟುಗಳಲ್ಲಿ ಮುದ್ರಣ ದೋಷ ಕಂಡುಬಂದಿದೆ. ಕೆಲವು ನೋಟುಗಳ ಹಿಂಬದಿಯಲ್ಲಿ ಮುದ್ರಣವೇ ಅಳಿಸಿ ಹೋಗಿದ್ದರೆ, ಮತ್ತೆ ಕೆಲವು ನೋಟಗಳ ಬಣ್ಣವೇ ಮಾಸಿ ಹೋಗಿದೆ. ಹೀಗಾಗಿ ಇಂತಹ ನೋಟುಗಳನ್ನು ಪಡೆದ ಜನ ಕಂಗಾಲಾಗಿದ್ದು, ಈ ನೋಟುಗಳ ಅಸಲಿಯೋ ನಕಲಿಯೋ ಎಂಬ ಗೊಂದಲಕ್ಕೀಡಾಗಿದ್ದಾರೆ. ಹೊಸ 500ರು. ಮುಖಬೆಲೆಯ ನೋಟುಗಳಲ್ಲಿ ಬಣ್ಣ ಏರುಪೇರಾಗಿದ್ದು, ಕೆಲ ನೋಟುಗಳು ಗಾಢ ಬಣ್ಣದಿಂದ ಕೂಡಿದ್ದು, ಮತ್ತೆ ಕೆಲ ನೋಟುಗಳು ತಿಳಿಬಣ್ಣದಿಂದ ಕೂಡಿವೆ. ಇದು ಜನರ ಆತಂಕಕ್ಕೆ ಕಾರಣವಾಗಿದೆ.
ಇನ್ನು ಈ ಬಗ್ಗೆ ಖಾಸಗಿ ಪತ್ರಿಕೆಯೊಂದಿಗೆ ಪ್ರತಿಕ್ರಿಯೆ ನೀಡಿರುವ ಆರ್ ಬಿಐ ವಕ್ತಾರರಾದ ಅಲ್ಪನಾ ಕಿಲ್ಲಾವಾಲ ಅವರು, ದೇಶಾದ್ಯಂತ ವ್ಯಾಪಕ ನೋಟಿನ ಅಭಾವವಿದೆ. ಈ ಹಿನ್ನಲೆಯಲ್ಲಿ ಹೆಚ್ಚೆಚ್ಚು ನೋಟು ಮುದ್ರಣ ಮಾಡುವ ತವಕದಲ್ಲಿ ಬಹುಶಃ ಕೆಲ ನೋಟುಗಳ ಮುದ್ರಣ ದೋಷಪೂರಿತವಾಗಿರಬಹುದು. ಇಂತಹ ನೋಟುಗಳನ್ನು ವ್ಯಾಪಾರಸ್ಥರು ಶಂಕೆ ಇಲ್ಲದೇ ಸ್ವೀಕರಿಸಬಹುದು ಅಥವಾ ಆ ನೋಟುಗಳನ್ನು ಆರ್ ಬಿಐ ಹಿಂದುರಿಗಿಸಬಹುದು ಎಂದು ಹೇಳಿದ್ದಾರೆ.