

ವಾರಾಣಾಸಿ : ರಾಮನಾಗಿ ಪ್ರಧಾನಿ ನರೇಂದ್ರ ಮೋದಿ, ಪಾಕ್ ಪ್ರಧಾನಿ ನವಾಜ್ ಷರೀಫ್ ರಾವಣ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮೇಘನಾದನ ರೀತಿ ಚಿತ್ರಿಸಿರುವ ಪೋಸ್ಟರ್ ಗಳು ಉತ್ತರ ಪ್ರದೇಶದ ವಾರಣಾಸಿಯಲ್ಲಿ ರಾರಾಜಿಸುತ್ತಿವೆ.
ಶಿವಸೇನೆಯ ವಾರಾಣಸಿ ಘಟಕವು ಮುದ್ರಿಸಿರುವ ಈ ಪೋಸ್ಟರ್ಗಳಲ್ಲಿ ಮೋದಿ ಅವರನ್ನು ರಾಮನಾಗಿಯೂ, ನವಾಜ್ ಶರೀಫ್ ಅವರನ್ನು ರಾವಣನಾಗಿಯೂ ಚಿತ್ರಿಸಲಾಗಿದೆ. ಅರವಿಂದ ಕೇಜ್ರಿವಾಲ್ ಅವರನ್ನು ಸೀಮಿತ ದಾಳಿಗೆ ಸಂಬಂಧಿಸಿದ ಸಾಕ್ಷ್ಯಾಧಾರ ಬಿಡುಗಡೆಗೆ ಆಗ್ರಹಿಸಿದ ಹಿನ್ನೆಲೆಯಲ್ಲಿ ರಾವಣನ ಪುತ್ರ ಮೇಘನಾದನಂತೆ (ಇಂದ್ರಜಿತು) ಚಿತ್ರಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರದ ಗಡಿ ದಾಟಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತ ಸೀಮಿತ ದಾಳಿ ನಡೆಸಿದ ದಾಖಲೆಗಳನ್ನು ಬಿಡುಗಡೆ ಮಾಡಬೇಕು ಎಂದು ಕೇಜ್ರಿವಾಲ್ ಮಂಗಳವಾರ ಆಗ್ರಹಿಸಿದ್ದರು. ಇದಕ್ಕೂ ಮುನ್ನ ಸೋಮವಾರ ಸರ್ಜಿಕಲ್ ದಾಳಿಗೆ ಸಂಬಂಧಿಸಿದಂತೆ ಕೇಜ್ರಿವಾಲ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದರು.