

ಲಖನೌ: ಉತ್ತರ ಪ್ರದೇಶದ ಆಡಳಿತಾರೂಢ ಸಮಾಜವಾದಿ ಪಕ್ಷದಲ್ಲಿ ಆಂತರಿಕ ಭಿನ್ನಮತ ಇನ್ನೂ ಬಗೆಹರಿದಿಲ್ಲ ಎಂಬುದು ಸ್ಪಷ್ಟವಾಗಿದ್ದು ಮುಂದಿನ ಮುಖ್ಯಮಂತ್ರಿಯನ್ನು ಶಾಸಕರೇ ಆಯ್ಕೆ ಮಾಡಲಿದ್ದಾರೆ ಎಂದು ಎಸ್ ಪಿ ಮುಖಂಡ ಮುಲಾಯಂ ಸಿಂಗ್ ಯಾದವ್ ತಿಳಿಸಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಆಯ್ಕೆಗೊಳ್ಳಲಿರುವ ಎಸ್ ಪಿ ಶಾಸಕರು ಹಾಗೂ ಸಂಸದೀಯ ಮಂಡಳಿ ಮುಂದಿನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಿದೆ ಎಂದು ಹೇಳಿದ್ದಾರೆ. ಸಮಾಜವಾದಿ ಪಕ್ಷದಲ್ಲಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹಾಗೂ ಶಿವ್ ಪಾಲ್ ಯಾದವ್ ನಡುವೆ ಭಿನ್ನಮತ ಉಂಟಾದ ನಂತರ ಮುಲಾಯಂ ಸಿಂಗ್ ಯಾದವ್ ಈ ಹೇಳಿಕೆ ನೀಡಿದ್ದಾರೆ. ಆದರೆ ಸಮಾಜವಾದಿ ಪಕ್ಷದಲ್ಲಿ ಯಾವುದೇ ಭಿನ್ನಮತ ಇಲ್ಲ ಎಂದು ಮುಲಾಯಂ ಸಿಂಗ್ ಯಾದವ್ ಸ್ಪಷ್ಟಪಡಿಸಿದ್ದಾರೆ.
ಪಕ್ಷದಲ್ಲಿ ಉಂಟಾಗಿದ್ದ ಭಿನ್ನಮತಕ್ಕೆ ರಾಜಿಸೂತ್ರಗಳನ್ನು ನೀಡಿದ ಬಳಿಕವೂ ಉತ್ತರ ಪ್ರದೇಶ ಸಿಎಂ ಅಖಿಲೇಶ್ ಯಾದವ್ ಅವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಮುಲಾಯಂ ಸಿಂಗ್ ಯಾದವ್, ಅಖಿಲೇಶ್ ಯಾದವ್ ರಿಂದ ತಮಗೆ ಪ್ರಧಾನಿ ಪಟ್ಟ ಕೈತಪ್ಪಿದೆ ಎಂದು ಆರೋಪಿಸಿದ್ದರು. 2014 ರ ಲೋಕಸಭಾ ಚುನಾವಣೆ ಬಳಿಕ ಅಖಿಲೇಶ್ ಯಾದವ್ ಅವರನ್ನು ಸಿಎಂ ಮಾಡಬೇಕಿತ್ತು ಎಂದು ಹೇಳಿದ್ದ ಮುಲಾಯಂ ಸಿಂಗ್ ಯಾದವ್ ಈಗ ಮುಂದಿನ ಮುಖ್ಯಮಂತ್ರಿಯನ್ನು ಶಾಸಕರೇ ಆಯ್ಕೆ ಮಾಡಲಿದ್ದಾರೆ ಎಂದಿದ್ದಾರೆ.