

ನವದೆಹಲಿ: ಭಾರತ ಸರ್ಕಾರ ಸ್ವಾಮ್ಯದ ಏರ್ ಇಂಡಿಯಾ ಸಂಸ್ಥೆಯ ಹಿರಿಮೆಗೆ ಮತ್ತೊಂದು ಗರಿ ಸೇರ್ಪಡೆಯಾಗಿದ್ದು, ನವದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ ಕೋ ಗೆ ನಿಲುಗಡೆ ರಹಿತ ಪ್ರಯಾಣ ಮಾಡುವ ಮೂಲಕ ದಾಖಲೆ ಬರೆದಿದೆ.
ದೆಹಲಿಯಿಂದ-ಸ್ಯಾನ್ ಫ್ರಾನ್ಸಿಸ್ಕೋ ನಡುವಿನ ಸುಮಾರು 15,300 ಕಿ.ಮೀ. ದೂರವನ್ನು ಯಾವುದೇ ನಿಲುಗಡೆ ಇಲ್ಲದೇ ಕೇವಲ 14.5 ಗಂಟೆಯಲ್ಲಿ ಪ್ರಯಾಣಿಸುವ ಮೂಲಕ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಹೊಸ ದಾಖಲೆ ಬರೆದಿದೆ. ಆ ಮೂಲಕ ಈ ಹಿಂದೆ ಎಮಿರೇಟ್ಸ್ ಸಂಸ್ಥೆಯ ಹೆಸರಿನಲ್ಲಿದ್ದ ವಿಶ್ವದಾಖಲೆಯನ್ನು ಏರ್ ಇಂಡಿಯಾ ತನ್ನ ಹೆಸರಿಗೆ ಬರೆಸಿಕೊಂಡಿದೆ.
ಈ ಹಿಂದೆ ಎಮಿರೇಟ್ಸ್ ಸಂಸ್ಥೆ ದುಬೈನಿಂದ ಆಕ್ಲೆಂಡ್ಗೆ 14,120 ಕಿ.ಮೀ. ದೂರ ನಿಲುಗಡೆ ರಹಿತ ಹಾರಾಟ ನಡೆಸುತಿತ್ತು. ಏರ್ ಇಂಡಿಯಾ ಕೂಡ ನಿಲುಗಡೆ ರಹಿತ ದೂರ ಪ್ರಯಾಣ ಮಾಡುತ್ತಿತ್ತಾದರೂ ಇಷ್ಟು ಪ್ರಮಾಣದ ದೂರವನ್ನು ಕ್ರಮಿಸಿರಲಿಲ್ಲ. ಈ ಮುನ್ನ ದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ಏರ್ ಇಂಡಿಯಾ ಅಟ್ಲಾಂಟಿಕ್ ಸಾಗರ ಮೇಲ್ಭಾಗದಿಂದ ವಿಮಾನ ಹಾರಾಟ ನಡೆಸುತ್ತಿತ್ತು. ಈ ಮಾರ್ಗ 13,900 ಕಿ.ಮೀ. ದೂರ ಇದ್ದು, ವಿಶ್ವದ ಎರಡನೇ ಅತಿ ದೂರದ ನಿಲುಗಡೆ ರಹಿತ ಮಾರ್ಗ ಎಂಬ ಹೆಗ್ಗಳಿಕೆ ಪಡೆದಿತ್ತು.
ಈದೀಗ ಈ ಮಾರ್ಗಕ್ಕೆ ಬದಲಾಗಿ ಏರ್ ಇಂಡಿಯಾ ಫೆಸಿಫಿಕ್ ಸಾಗರದ ಮೇಲ್ಭಾಗದಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ವಿಮಾನ ಹಾರಾಟ ನಡೆಸಿದೆ. ಈ ಹೊಸ ಮಾರ್ಗ 1,400 ಕಿ.ಮೀ. ಹೆಚ್ಚು ದೂರ ಹೊಂದಿದ್ದರೂ ಸಹ ಸುಮಾರು 2 ಗಂಟೆ ಕಡಿಮೆ ಅವಧಿಯಲ್ಲಿ ಗುರಿ ತಲುಪಬಹುದಾಗಿದೆ ಎಂಬುದನ್ನು ಏರ್ ಇಂಡಿಯಾದ ಹೊಸ ಪ್ರಯಾಣ ಸಾಬೀತು ಪಡಿಸಿದೆ.
ಏರ್ ಇಂಡಿಯಾದ ಬೋಯಿಂಗ್ 777 200 ವಿಮಾನವನ್ನು ಸುಧೀರ್ಘ ಪ್ರಯಾಣಕ್ಕೆ ಬಳಸಿಕೊಳ್ಳಲಾಗಿದ್ದು, ಒಟ್ಟು 9600 ಲೀಟರ್ ಇಂಧನ ಈ ಪ್ರಯಾಣಕ್ಕೆ ಖರ್ಚಾಗಿದೆ. ಏರ್ ಇಂಡಿಯಾದ ಈ ದಾಖಲೆಯಲ್ಲಿ ನಾಲ್ಕು ಪೈಲಟ್ ಗಳ ಶ್ರಮವಿದ್ದು, ಪೈಲಟ್ ಗಳಾದ ಕ್ಯಾಪ್ಟನ್ ರಜನೀಶ್ ಶರ್ಮಾ, ಗೌತಮ್ ವರ್ಮಾ, ಎಂಎ ಖಾನ್ ಹಾಗೂ ಎಸ್ ಎಂ ಪಲೇಕರ್ ಅವರ ಪಾಳಿ ಲೆಕ್ಕಾಚಾರದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಇವರಿಗೆ ವಿಮಾನದ 10 ಸಿಬ್ಬಂದಿಗಳು ಕೂಡ ಸಾಥ್ ನೀಡಿದರು ಎಂದು ಏರ್ ಇಂಡಿಯಾ ಸಂಸ್ಥೆ ಹೇಳಿದೆ.
ಏರ್ ಇಂಡಿಯಾ ದಾಖಲೆಗೆ ನೆರವಾದ ಗಾಳಿಯ ದಿಕ್ಕು
ಭೂಮಿ ಪಶ್ಚಿಮದಿಂದ ಪೂರ್ವಕ್ಕೆ ತಿರುಗುವುದರಿಂದ ಗಾಳಿ ಸಹ ಅದೇ ದಿಕ್ಕಿನಲ್ಲಿ ಬೀಸುತ್ತದೆ. ಇದರಿಂದ ಪಶ್ಚಿಮದಿಂದ ಪೂರ್ವಕ್ಕೆ ಸಾಗುವ ಮಾರ್ಗದಲ್ಲಿ ಗಾಳಿಯ ಘರ್ಷಣೆ ಕಡಿಮೆ ಇರುತ್ತದೆ. ಹಾಗಾಗಿ ವಿಮಾನ ವೇಗವಾಗಿ ಸಾಗಲು ಅನುಕೂಲವಾಗುತ್ತದೆ. ಜತೆಗೆ ಇಂಧನ ಬಳಕೆ ಪ್ರಮಾಣ ಸಹ ಕಡಿಮೆಯಾಗಲಿದೆ ಎಂದು ಏರ್ ಇಂಡಿಯಾದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.