
ನವದೆಹಲಿ: ಮುಂಬೈನ ಹಾಜಿ ಅಲಿ ದರ್ಗಾ ಪ್ರವೇಶಿಸಲು ಮಹಿಳೆಯರಿಗೆ ಇದ್ದ ಎಲ್ಲಾ ಅಡೆತಡೆಗಳು ಇದೀಗ ನಿವಾರಣೆಯಾಗಿದ್ದು, ಮಹಿಳೆಯರು ದರ್ಗಾ ಪ್ರವೇಶ ಮಾಡುವುದಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಹಾಜಿ ಅಲಿ ದರ್ಗಾದ ಟ್ರಸ್ಟ್ ಸೋಮವಾರ ಸುಪ್ರೀಂಕೋರ್ಟ್ ಗೆ ಹೇಳಿದೆ.
ಶನಿ ಶಿಂಗ್ಣಾಪುರ ದೇಗುಲ ವಿವಾದದ ಬಳಿಕ ಮುಂಬೈನ ಹಾಜಿ ಅಲಿ ದರ್ಗಾದಲ್ಲೂ ಇದೇ ರೀತಿಯ ವಿವಾದವೊಂದು ಸೃಷ್ಟಿಯಾಗಿತ್ತು. ಹಾಜಿ ಅಲಿ ದರ್ಗಾ ಪ್ರವೇಶಿಸಲು ಮಹಿಳೆಯರಿಗೆ ನಿಷೇಧ ಹೇರಲಾಗಿತ್ತು. ಇದಕ್ಕೆ ಸಾಕಷ್ಟು ಮಹಿಳಾ ಸಂಘಟನೆಗಳು ವಿರೋಧವನ್ನು ವ್ಯಕ್ತಪಡಿಸಿದ್ದರು. ಇದರಂತೆ ಕೆಲ ದಿನ ಹಿಂದೆ ಬಾಂಬೆ ಹೈಕೋರ್ಟ್ ಕೂಡ ಐತಿಹಾಸಿಕ ತೀರ್ಪನ್ನು ಹೊರಹಾಕಿತ್ತು. ಮಹಿಳೆಯರು ಹಾಜಿ ಅಲಿ ದರ್ಗಾ ಪ್ರವೇಶ ಮಾಡಬಹುದು ಎಂದು ತೀರ್ಪು ನೀಡಿತ್ತು.
ಬಾಂಬ್ ಹೈಕೋರ್ಟ್ ನ ಈ ತೀರ್ಪಿಗೆ ಹಾಲಿ ಅಜಿ ದರ್ಗಾ ಟ್ರಸ್ಟ್ ವಿರೋಧ ವ್ಯಕ್ತಪಡಿಸಿತ್ತು. ಅಲ್ಲದೆ, ನ್ಯಾಯಾಲಯದ ಈ ತೀರ್ಪು ಅಸಂವಿಧಾನಿಕ ಎಂದು ಹೇಳಿ ಸುಪ್ರೀಂಕೋರ್ಟ್ ನ ಮೆಟ್ಟಿಲೇರಿತ್ತು.
ಇದರಂತೆ ಇಂದು ಈ ಆರ್ಜಿಯನ್ನು ವಿಚಾರಣೆ ನಡೆಸಿರುವ ಸುಪ್ರೀಂ, ದರ್ಗಾಗೆ ಪ್ರವೇಶ ಮಾಡಲು ಮಹಿಳೆಯರಿಗೂ ಅವಕಾಶ ನೀಡಿ. ದರ್ಗಾದಲ್ಲಿ ಸಮಾನತೆಯನ್ನು ಕಾಯ್ದುಕೊಳ್ಳುವಂತೆ ಸೂಚನೆ ನೀಡಿತ್ತು. ಸುಪ್ರೀಂ ತೀರ್ಪಿನಂತೆಯೇ ದರ್ಗಾದ ಟ್ರಸ್ಟ್ ಕೂಡ ಧನಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದು, ಮಹಿಳೆಯರ ಪ್ರವೇಶಕ್ಕೆ ಒಪ್ಪಿಗೆ ಸೂಚಿಸಿದೆ.
ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಲು ನಾಲ್ಕು ವಾರಗಳೊಳಗಾಗಿ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆಯೂ ದರ್ಗಾ ಟ್ರಸ್ಟ್ ಗೆ ಸುಪ್ರೀಂ ಕಾಲಾವಕಾಶವನ್ನು ನೀಡಿದೆ ಎಂದು ತಿಳಿದುಬಂದಿದೆ.
Advertisement