ಭೂಗತ ಪಾತಕಿ ದಾವೂದ್ ಬಂಧನಕ್ಕೆ 50 ಸದಸ್ಯರ ವಿಶೇಷ ತಂಡ ರಚನೆ

ಪಾಕಿಸ್ತಾನದಲ್ಲಿ ಅಡಗಿ ಕುಳಿತು ತನ್ನ ಎಲ್ಲಾ ಚಟುವಟಿಕೆಗಳನ್ನು ಮುಂದುವರೆಸುತ್ತಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಸೆರೆಹಿಡಿಯಲು ಕೇಂದ್ರ ಸರ್ಕಾರ ಹೊಸ ನೀಲನಕ್ಷೆಯನ್ನು ಸಿದ್ಧಪಡಿಸಿದ್ದು...
ಭೂಗತ ಪಾತಕಿ ದಾವೂದ್ ಇಬ್ರಾಹಿಂ
ಭೂಗತ ಪಾತಕಿ ದಾವೂದ್ ಇಬ್ರಾಹಿಂ
Updated on

ನವದೆಹಲಿ: ಪಾಕಿಸ್ತಾನದಲ್ಲಿ ಅಡಗಿ ಕುಳಿತು ತನ್ನ ಎಲ್ಲಾ ಚಟುವಟಿಕೆಗಳನ್ನು ಮುಂದುವರೆಸುತ್ತಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಸೆರೆಹಿಡಿಯಲು ಕೇಂದ್ರ ಸರ್ಕಾರ ಹೊಸ ನೀಲನಕ್ಷೆಯನ್ನು ಸಿದ್ಧಪಡಿಸಿದ್ದು, ಇದಕ್ಕಾಗಿ 50 ಮಂದಿ ಸದಸ್ಯರ ವಿಶೇಷ ತಂಡವನ್ನು ರಚಿಸಿದೆ.

ಹಲವು ವರ್ಷಗಳಿಂದಲೂ ದಾವೂದ್ ಪಾಕಿಸ್ತಾನದಲ್ಲೇ ಅಡಗಿ ಕುಳಿತಿದ್ದು, ಪಾಕಿಸ್ತಾನದ ಕರಾಚಿಯಲ್ಲಿಯೇ ನೆಲೆಯೂರಿದ್ದಾನೆಂದು ಈ ಹಿಂದೆ ಗುಪ್ತಚರ ಇಲಾಖೆ ಖಚಿತ ಮಾಹಿತಿ ನೀಡಿತ್ತು. ಈ ಮಾಹಿತಿಯನ್ನು ಆಧರಿಸಿ ದಾವೂದ್ ನನ್ನು ಸೆರೆಹಿಡಿಯಲು ಕೇಂದ್ರ ವಿಶೇಷ ತಂಡವನ್ನು ರೂಪಿಸಿದೆ ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.

50 ಉನ್ನತಾಧಿಕಾರಿಗಳನ್ನೊಳಗೊಂಡ 5 ವಿಶೇಷ ತನಿಖಾ ತಂಡಗಳನ್ನು ಕೇಂದ್ರ ರಚನೆ ಮಾಡಿದ್ದು, ವಿಶ್ವದಾದ್ಯಂತ ದಾವೂದ್ ಗೆ ಸೇರಿದ ಉದ್ಯಮ ಸಾಮ್ರಾಜ್ಯ ಹಾಗೂ ಇನ್ನಿತರೆ ಆಸ್ತಿಪಾಸ್ತಿಗಳನ್ನು ನಾಶ ಮಾಡುವುದು ಸರ್ಕಾರದ ಉದ್ದೇಶವಾಗಿದೆ. ದಾವೂದ್ ಹಾಗೂ ಆತನ ಸಹಚರರ ಚಟುವಟಿಕೆಗಳ ಮೇಲೆ ಅಧಿಕಾರಿಗಳು ಕಣ್ಗಾವಲಿರಿಸಲಿದ್ದು, ಇದಕ್ಕಾಗಿ ಅಧಿಕಾರಿಗಳಿಗೆ ಸರ್ಕಾರ ವಿಶೇಷ ಅಧಿಕಾರವನ್ನು ನೀಡಿದೆ ಎನ್ನಲಾಗಿದೆ.

ಕರಾಚಿಯಲ್ಲೇ ಇದ್ದಾನೆ ದಾವೂದ್?

ದಾವೂದ್ ಕರಾಚಿಯಲ್ಲಿಯೇ ಇರುವ ಕುರಿತಂತೆ ಗುಪ್ತಚರ ಇಲಾಖೆ ಮಾಹಿತಿಗಳನ್ನು ಕಲೆ ಹಾಕಿದ್ದು, ಆರೋಗ್ಯ ಸಮಸ್ಯೆಯಿಂದಾಗಿ ಆತ ಕರಾಚಿಯನ್ನು ಬಿಟ್ಟು ದೂರ ಪ್ರಯಾಣ ಮಾಡುತ್ತಿಲ್ಲ. ಕರಾಚಿಯಲ್ಲಿಯೂ ಕೂಡ ಬೇರೆಲ್ಲೂ ಓಡಾಡುತ್ತಿಲ್ಲ ಎಂದು ಹೇಳಿಕೊಂಡಿದೆ.

ದಾವೂದ್ ಹಾಗೂ ಆತನ ಕುಟುಂಬಸ್ಥರೆಲ್ಲರೂ ಓಡಾಡುವುದಕ್ಕೆ ಬುಲೆಟ್ ಫ್ರೂಫ್ (ಗುಂಡು ನಿರೋಧಕ) ಕಾರನ್ನೇ ಉಪಯೋಗಿಸುತ್ತಿದ್ದು, ಇದಕ್ಕಾಗಿ 6 ಲ್ಯಾಂಡ್ ಕ್ರೂಸರ್ ಕಾರುಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದೆ.

ಅಲ್ಲದೆ, ಪಾಕಿಸ್ತಾನದಲ್ಲೂ ತನ್ನ ಮೇಲೆ ದಾಳಿ ನಡೆಯಬಹುದೆಂಬ ಭಯದಲ್ಲಿರುವ ದಾವೂದ್, ಈ ಹಿನ್ನೆಲೆಯಲ್ಲಿ 'ಶೇಖ್ ಇಸ್ಮಾಯಿಲ್ ಮರ್ಚೆಂಟ್' ಎಂಬ ಹೆಸರಿನಲ್ಲಿ ಕರಾಚಿಯಲ್ಲಿ ನೆಲೆಯೂರಿದ್ದಾನೆ ಎನ್ನಲಾಗಿದೆ. ಭದ್ರತೆ ದೃಷ್ಟಿಯಿಂದಾಗಿ ಯಾವುದೇ ಫೋನ್ ಕರೆಯನ್ನು ಸ್ವೀಕರಿಸುತ್ತಿಲ್ಲ. ದಾವೂದ್ ಪರವಾಗಿ ಆತನ ಪತ್ನಿ ಮಹ್ಜಬೀನ್ ಶೇಖ್ ಎಲ್ಲಾ ಕರೆಯನ್ನು ಸ್ವೀಕರಿಸುತ್ತಿದ್ದು, ದಾವೂದ್ ನಿರ್ದೇಶನದಂತೆಯೇ ಆಕೆ ಫೋನ್ ನಲ್ಲಿ ಮಾತನಾಡುತ್ತಿದ್ದಾಳೆಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com