

ಮುಂಬೈ: ಬಿಎಂಸಿ ಅಧಿಕಾರಿಗಳು ಲಂಚ ಕೇಳಿದರು ಎಂದು ಆರೋಪಿಸಿ ಪ್ರಧಾನಿ ಮೋದಿ ಅವರಿಗೆ ಟ್ವೀಟ್ ಮಾಡಿದ್ದ ಖ್ಯಾತ ಕಿರುತೆರೆ ಹಾಸ್ಯನಟ ಕಪಿಲ್ ಶರ್ಮಾ ಇದೀಗ ಮತ್ತೊಂದು ವಿವಾದಲ್ಲಿ ಸಿಲುಕಿದ್ದು, ಅಪೂರ್ವ ಕಾಡು ನಾಶ ಪ್ರಕರಣ ಸಂಬಂಧ ಎಫ್ ಐ ಆರ್ ದಾಖಲಾಗಿದೆ.
ಕಿರುತೆರೆ ಹಾಸ್ಯ ನಟ ಕಪಿಲ್ ಶರ್ಮಾ ಇತ್ತೀಚೆಗೆ ಬೃಹನ್ ಮುಂಬೈ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಗೋರೆಗಾಂವ್ ಪ್ರದೇಶದಲ್ಲಿನ ಡಿಎಚ್ ಎಲ್ ಎನ್‌ಕ್ಲೇವ್‌ನಲ್ಲಿ ಫ್ಲಾಟ್ ಖರೀದಿಸಿದ್ದು, ಇದೇ ಫ್ಲಾಟ್ ನ 5ನೇ ಮಹಡಿಯಲ್ಲಿ ಪೀಕು ಖ್ಯಾತಿಯ ನಟ ಇರ್ಫಾನ್ ಖಾನ್ ಕೂಡ ಫ್ಲಾಟ್ ಖರೀದಿಸಿದ್ದಾರೆ. ಆದರೆ ಅಧಿಕಾರಿಗಳ ಪ್ರಕಾರ ಈ ಫ್ಲಾಟ್ ನಿರ್ಮಾಣ ಅಕ್ರಮವಾಗಿದ್ದು, ಫ್ಲಾಟ್ ನಿರ್ಮಾಣಕ್ಕಾಗಿ ಇಲ್ಲಿನ ಮ್ಯಾಂಗ್ರೋವ್ ಕಾಡನ್ನು ನಾಶಪಡಿಸಲಾಗಿದೆ ಎಂಬ ಗಂಭೀರ ಆರೋಪ ಈ ನಟರ ಮೇಲಿದೆ.
ಗೋರೆಗಾಂವ್ ಪ್ರದೇಶದಲ್ಲಿರುವ ಡಿಎಚ್‌ಎಲ್ ಎನ್‌ಕ್ಲೇವ್ ಕಟ್ಟಡ 9 ಅಂತಸ್ತಿನಿಂದ ಕೂಡಿದ್ದು, ನಟರಾದ ಕಪಿಲ್ ಶರ್ಮಾ ಮತ್ತು ಇರ್ಫಾನ್ ಖಾನ್ ಸೇರಿದಂತೆ ನೂರಾರು ಜನ ಫ್ಲ್ಯಾಟ್ ಹೊಂದಿದ್ದಾರೆ. ಈ ಪೈಕಿ 40-50 ನಿವಾಸಿಗಳು, ಅಕ್ರಮ ನಿರ್ಮಾಣ ಚಟುವಟಿಕೆ ಮೂಲಕ ಕಟ್ಟಡದ ಪಕ್ಕದಲ್ಲೇ ಇರುವ ಮ್ಯಾಂಗ್ರೋವ್ ಕಾಡುಗಳಿಗೆ ಹಾನಿ ಮಾಡಿರುವುದು ಕಂಡುಬಂದಿದೆ. ನಿನ್ನೆಯಷ್ಟೇ ಮಹಾರಾಷ್ಟ್ರ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದಾಗ, ನಿವಾಸಿಗಳಿಂದ ನಿಯಮ ಉಲ್ಲಂಘನೆ ಮಾಡಿರುವುದು ಖಚಿತವಾಗಿದೆ.
ಈ ಹಿನ್ನೆಲೆಯಲ್ಲಿ ಕಪಿಲ್ ಸೇರಿ ಹಲವರ ವಿರುದ್ಧ ಮಹಾರಾಷ್ಟ್ರ ಪ್ರಾದೇಶಿಕ ನಗರ ಯೋಜನೆ ಕಾಯ್ದೆ1966ರಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಜೊತೆಗೆ ಶೀಘ್ರವೇ ಅರಣ್ಯ ನಿಯಮ ಉಲ್ಲಂಘನೆ ಕುರಿತು ವರದಿ ನೀಡುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಈ ಹಿನ್ನಲೆಯಲ್ಲಿ ಕೇವಲ ಕಪಿಲ್ ಶರ್ಮಾ ಮಾತ್ರವಲ್ಲದೇ ಈ ವಿವಾದಿತ ಕಟ್ಟಡದಲ್ಲಿ ಫ್ಲಾಟ್ ಗಳನ್ನು ಖರೀದಿಸಿರುವವರ ಪೈಕಿ 40-50 ನಿವಾಸಿಗಳ ವಿರುದ್ಧ ಎಫ್ ಐಆರ್ ದಾಖಲಾಗಿದ್ದು, ಆರೋಪ ಸಾಬೀತಾದರೆ ಎಲ್ಲ ನಿವಾಸಿಗಳಿಗೆ ಕನಿಷ್ಠ1 ವರ್ಷ ಹಾಗೂ ಗರಿಷ್ಠ 3 ವರ್ಷಗಳ ಕಾಲ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ.