

ಪಣಜಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ನಡೆಸಲಾದ ನಾಲಿಗೆ ಶಸ್ತ್ರಚಿಕಿತ್ಸೆ ಬಗ್ಗೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಲಘುಧಾಟಿಯಲ್ಲಿ ಪ್ರತಿಕ್ರಿಯೆ ನೀಡಿದ್ದು, ಕೇಜ್ರಿವಾಲ್ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೆಚ್ಚು ಮಾತನಾಡುತ್ತಾರೆ ಆದ್ದರಿಂದ ಅವರ ನಾಲಿಗೆಗೆ ಕತ್ತರಿ ಹಾಕಲಾಗಿದೆ ಎಂದು ಹೇಳಿದ್ದಾರೆ.
ಗೋವಾ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಕೇಜ್ರಿವಾಲ್ ಅವರಿಗೆ ಶಸ್ತ್ರಚಿಕಿತ್ಸೆ ನಡೆದಿರುವ ಬಗ್ಗೆ ಸಹಾನುಭೂತಿಯನ್ನು ವ್ಯಕ್ತಪಡಿಸಿದ್ದಾರೆ. ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಯಾವಾಗಲೂ ಪ್ರಧಾನಿ ವಿರುದ್ಧ ಮಾತನಾಡುತ್ತಿರುತ್ತಾರೆ. ಗೋವಾದಲ್ಲಿ ನನ್ನ ವಿರುದ್ಧ ಮಾತನಾಡುತ್ತಾರೆ. ಆದ್ದರಿಂದ ಅವರ ನಾಲಿಗೆಗೆ ಕತ್ತರಿ ಹಾಕಬೇಕಾಗಿದೆ ಎಂದು ಹೇಳಿದ್ದಾರೆ. ಆದರೆ ತಕ್ಷಣವೇ " ಕೇಜ್ರಿವಾಲ್ ಅನಾರೋಗ್ಯಕ್ಕೊಳಗಾಗಿರುವ ಬಗ್ಗೆ ಸಹಾನುಭೂತಿ ಇದೆ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರದ ಕಾರ್ಯವೈಖರಿಯ ಬಗ್ಗೆ ಮಾತನಾಡಿರುವ ಮನೋಹರ್ ಪರಿಕ್ಕರ್, ದೆಹಲಿಯ ಮೊಹಲ್ಲಾಗಳಲ್ಲಿರುವ ಆಸ್ಪತ್ರೆಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದ್ದಿದ್ದರೆ 40 ಜನರು ಚಿಕನ್ ಗುನ್ಯಾದಿಂದ ಏಕೆ ಸಾಯುತ್ತಿದ್ದರು ಎಂದು ಪ್ರಶ್ನಿಸಿದ್ದಾರೆ. ದೆಹಲಿಯಲ್ಲಿ ಡೆಂಗ್ಯೂ ಚಿಕನ್ ಗುನ್ಯಾ ಹೆಚ್ಚುತ್ತಿರುವುದು ಆಮ್ ಆದ್ಮಿ ಪಕ್ಷ ಇಷ್ಟು ದಿನ ಹೇಳುತ್ತಿದ್ದ ಸುಳ್ಳನ್ನು ಬಯಲು ಮಾಡಿದೆ ಎಂದು ಮನೋಹರ್ ಪರಿಕ್ಕರ್ ಹೇಳಿದ್ದಾರೆ.
ಇನ್ನು ದೆಹಲಿಯ ಸಚಿವರು, ಶಾಸಕರು ಸಾಲು ಸಾಲಾಗಿ ಜೈಲಿಗೆ ಹೋಗುತ್ತಿರುವುದರ ಬಗ್ಗೆ ಲೇವಡಿ ಮಾಡಿರುವ ಮನೋಹರ್ ಪರಿಕ್ಕರ್, " ದೆಹಲಿಯ ಬಹುತೇಕ ಶಾಸಕರು ಜೈಲಿನಲ್ಲಿರುವುದರಿಂದ ತಿಹಾರ್ ಜೈಲಿನ ಸುಪರಿಟೆಂಡೆಂಟ್ ತಮ್ಮನ್ನು ದೆಹಲಿ ಸಿಎಂ ಆಗಿ ಮಾಡಬೇಕೆಂದು ದೆಹಲಿ ಲೆಫ್ಟಿನೆಂಟ್ ಗೌರ್ನರ್ ಗೆ ಪತ್ರ ಬರೆದಿದ್ದಾರೆ ಎಂಬ ಜೋಕ್ ವಾಟ್ಸ್ ಆಪ್ ನಲ್ಲಿ ಹರಿದಾಡುತ್ತಿದೆ" ಎಂದಿದ್ದಾರೆ.