ಪಾಕಿಸ್ತಾನ 'ಭಯೋತ್ಪಾದಕ ರಾಷ್ಟ್ರ': ವಿಶ್ವಸಂಸ್ಥೆಯಲ್ಲಿ ಭಾರತ

ಭಾರತದ ವಿರುದ್ಧ ಯುದ್ಧ ಅಪರಾಧಗಳನ್ನು ನಡೆಸುವ ಮೂಲಕ ಉಗ್ರತ್ವವನ್ನು ಪ್ರಚೋದಿಸುತ್ತಿರುವ ನೀತಿಯನ್ನು ಪಾಕಿಸ್ತಾನ ಹೊಂದಿದ್ದು, ಪಾಕಿಸ್ತಾನ ಭಯೋತ್ಪಾದನಾ ರಾಷ್ಟವಾಗಿದೆ ಎಂದು...
ವಿಶ್ವಸಂಸ್ಥೆಯ ಭಾರತದ ಖಾಯಂ ನಿಯೋಗದ ಕಾರ್ಯದರ್ಶಿ ಏನಮ್ ಗಂಭೀರ್
ವಿಶ್ವಸಂಸ್ಥೆಯ ಭಾರತದ ಖಾಯಂ ನಿಯೋಗದ ಕಾರ್ಯದರ್ಶಿ ಏನಮ್ ಗಂಭೀರ್

ವಿಶ್ವಸಂಸ್ಥೆ: ಭಾರತದ ವಿರುದ್ಧ ಯುದ್ಧ ಅಪರಾಧಗಳನ್ನು ನಡೆಸುವ ಮೂಲಕ ಉಗ್ರತ್ವವನ್ನು ಪ್ರಚೋದಿಸುತ್ತಿರುವ ನೀತಿಯನ್ನು ಪಾಕಿಸ್ತಾನ ಹೊಂದಿದ್ದು, ಪಾಕಿಸ್ತಾನ ಭಯೋತ್ಪಾದನಾ ರಾಷ್ಟವಾಗಿದೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತ ಗುರುವಾರ ಹೇಳಿದೆ.

ವಿಶ್ವಸಂಸ್ಥೆಯ 71ನೇ ಯುಎನ್ ಜಿಎ ಮಹಾಸಭೆಯಲ್ಲಿ ಮಾತನಾಡಿರುವ ವಿಶ್ವಸಂಸ್ಥೆಯ ಭಾರತದ ಖಾಯಂ ಕಾರ್ಯದರ್ಶಿ ಏನಮ್ ಗಂಭೀರ್ ಅವರು, ವಿಶ್ವಸಂಸ್ಥೆ ಗೊತ್ತುಪಡಿಸಿರುವ ಭಯೋತ್ಪಾದಕರು ಅಲ್ಲಿನ ಸರ್ಕಾರದ ಬೆಂಬಲದೊಂದಿಗೆ ಪಾಕಿಸ್ತಾನದ ಬೀದಿ-ಬೀದಿಗಳಲ್ಲಿ ಮುಕ್ತವಾಗಿ ಸಂಚರಿಸಿ ತಮ್ಮ ಭಯೋತ್ಪಾದನಾ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಪಾಕಿಸ್ತಾನ ಅಪರಾಧ ಕೃತ್ಯಗಳನ್ನು ಎಸಗುವುದನ್ನೇ ತನ್ನ ರಾಷ್ಟ್ರೀಯ ನೀತಿಯಾಗಿಸಿಕೊಂಡಿದೆ ಎಂದು ಟೀಕಿಸಿದ್ದಾರೆ.

ಪಾಕಿಸ್ತಾನ ರಾಷ್ಟ್ರ ಅಂತರರಾಷ್ಟ್ರೀಯ ಹಣಕಾಸು ನಿಧಿಯನ್ನು ಬಳಸಿಕೊಂಡು ಭಯೋತ್ಪಾದನಾ ಚಟುವಟಿಕೆಗಳಿಗೆ ಆರ್ಥಿಕ ನೆರವು ಮತ್ತು ತರಬೇತಿಯನ್ನು ನೀಡುತ್ತಿದೆ. ಈ ಮೂಲಕ ನೆರೆ ರಾಷ್ಟ್ರಗಳಲ್ಲಿನ ಶಾಂತಿಯನ್ನು ಕದಡುವ ಕೆಲಸವನ್ನು ಮಾಡುತ್ತಿದೆ.

ದೇಶದ ನೀತಿಯನ್ನು ದಾಳವಾಗಿ ಬಳಸಿಕೊಳ್ಳುವುದು ಯುದ್ಧ ಅಪರಾಧವಾಗಿದ್ದು, ಭಯೋತ್ಪಾದನೆಗೆ ಪಾಕಿಸ್ತಾನ ನೀಡುತ್ತಿರುವ ಕುಮ್ಮಕ್ಕಿನಿಂದ ನಮ್ಮ ದೇಶ ಹಾಗೂ ನೆರೆ ದೇಶಗಳು ಸಮಸ್ಯೆ ಎದುರಿಸುವಂತಾಗಿದೆ. ಭಯೋತ್ಪಾದನೆ ಕುರಿತಂತೆ ಅಂತರಾಷ್ಟ್ರೀಯ ಸಮುದಾಯದಲ್ಲಿ ಪಾಕಿಸ್ತಾನ ನಮಗೆ ತಪ್ಪು ಭರವಸೆಗಳನ್ನು ನೀಡಿದೆ.

ಸಭೆಯಲ್ಲಿ ಕಾಶ್ಮೀರ ವಿಚಾರ ಪ್ರಸ್ತಾಪ ಮಾಡಿದ ನವಾಜ್ ಶರೀಫ್ ಅವರು ಉಗ್ರ ಬುರ್ಹಾನ್ ವಾನಿಯನ್ನು ಪ್ರಶಂಸಿಸಿ, ವೈಭವೀಕರಿಸಿದ್ದಾರೆ, ಈ ಹೇಳಿಕೆಯನ್ನು ಗಮನಿಸಿದರೆ ಪಾಕಿಸ್ತಾನ ತನ್ನ ಭಯೋತ್ಪಾದಕರ ಜೊತೆಗೆ ನಿಕಟ ಸಂಬಂಧ ಹೊಂದಿರುವುದು ಸ್ಪಷ್ಟವಾಗುತ್ತದೆ. ಉಗ್ರ ಬುರ್ಹಾನ್ ವಾನಿಯನ್ನು ಪಾಕಿಸ್ತಾನ ಸಮರ್ಥಿಸಿಕೊಂಡಿರುವುದನ್ನು ಭಾರತ ವಿರೋಧಿಸುತ್ತದೆ. ವಿಶ್ವದಲ್ಲಿ ಭಯೋತ್ಪಾದನೆ ಮೇಲುಗೈ ಸಾಧಿಸುವುದಕ್ಕೆ ಭಾರತ ಎಂದಿಗೂ ಅವಕಾಶವನ್ನು ನೀಡುವುದಿಲ್ಲ ಎಂದು ವಿಶ್ವಸಂಸ್ಥೆಗೆ ಏನಮ್ ತಿಳಿಸಿದ್ದಾರೆ

ಏನಮ್ ಮಾತನಾಡುವುದಕ್ಕೂ ಮುನ್ನ ಪಾಕಿಸ್ತಾನ ಪ್ರಧಾನಿ ನವಾಜ್ ಶರೀಫ್ ಅವರು ಮಾತನಾಡಿದ್ದರು. ಸಭೆಯಲ್ಲಿ ಮಾತನಾಡುವಾಗ ಕಾಶ್ಮೀರ ವಿಚಾರವನ್ನು ಪ್ರಸ್ತಾಪಿಸಿದ್ದರು, ಕಾಶ್ಮೀರದೊಂದಿಗೆ ಪಾಕಿಸ್ತಾನ ನಿಕಟ ಸಂಪರ್ಕವನ್ನು ಹೊಂದಿದ್ದು, ಕಾಶ್ಮೀರ ವಿಚಾರದಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಲು ನಾವು ಸಿದ್ಧರಿದ್ದೇವೆ. ಆದರೆ, ಮಾತುಕತೆಗೆ ಭಾರತವೇ ಸಿದ್ಧವಿಲ್ಲ ಎಂದು ಹೇಳಿದ್ದರು. ಅಲ್ಲದೆ, ಸಭೆ ವೇಳೆ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಕಮಾಂಡರ್ ಆಗಿದ್ದ ಬುರ್ಹಾನ್ ವಾನಿಯೊಬ್ಬ ಯುವ ನಾಯಕನಾಗಿದ್ದ ಎಂದು ಹೇಳುವ ಮೂಲಕ ಉಗ್ರನನ್ನು ಪ್ರಶಂಸಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com