

ಹೈದರಾಬಾದ್: ಪ್ರಿಯಕರನೊಂದಿಗೆ ಚಕ್ಕಂದವಾಡುತ್ತಿದ್ದುದ್ದನ್ನು ನೋಡಿದ ಪತಿಯನ್ನು ಪತ್ನಿ ಪ್ರಿಯಕರನೊಂದಿಗೆ ಸೇರಿ ಹತ್ಯೆ ಮಾಡಿರುವ ಘಟನೆ ಶನಿವಾರ ಹೈದರಾಬಾದ್ ನ ಎಲ್ ಬಿ ನಗರದಲ್ಲಿ ನಡೆದಿದೆ.
ಅಷ್ಟೇ ಅಲ್ಲದೆ ಪತಿಯ ಶವದೊಂದಿಗೆ ಬೈಕ್ ನಲ್ಲಿ ತ್ರಿಬಲ್ಸ್ ಹೋಗುವಾಗ ಪೊಲೀಸರಿಗೆ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ. ಹಯಾತ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ದಿನಕೂಲಿ ನೌಕರನಾಗಿರುವ 28 ವರ್ಷದ ಪುಲ್ಲೈಯ ಹತ್ಯೆಗೊಳಗಾದ ದುರ್ದೈವಿ. ಶನಿವಾರ ಪುಲ್ಲೈಯ ಮನೆಗೆ ಬಂದ ಸಂದರ್ಭದಲ್ಲಿ ಪತ್ನಿ ಪ್ರವಳಿಕ ತನ್ನ ಪ್ರಿಯತಮ ಉಪೇಂದ್ರ ಜತೆ ಮಾತನಾಡುತ್ತಿರುತ್ತಾಳೆ ಇದನ್ನು ಗಮನಿಸಿದ ಪುಲ್ಲೈಯ ಉಪೇಂದ್ರ ಯಾರೆಂದು ಕೇಳುತ್ತಾನೆ. ಈ ವೇಳೆ ಪತಿ-ಪತ್ನಿ ನಡುವೆ ವಾಗ್ವಾದ ನಡೆದು ಪ್ರವಳಿಕ ಉಪೇಂದ್ರ ಜತೆ ಸೇರಿ ಪುಲ್ಲೈಯನನ್ನು ಹತ್ಯೆ ಮಾಡುತ್ತಾರೆ.
ಬಳಿಕ ಪುಲ್ಲೈಯ ಪ್ರಜ್ಞಾಹೀನರಾಗಿರುವುದಾಗಿ ಕುಟುಂಬಸ್ಥರಿಗೆ ತಿಳಿಸಿ ಪುಲ್ಲೈಯನ ಶವವನ್ನು ಬೈಕ್ ನ ಮಧ್ಯದಲ್ಲಿ ಕೂರಿಸಿಕೊಂಡು ಅಬ್ದುಲ್ ಪುರಮೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೋಗುವಾಗ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಪ್ರವಳಿಕ ಪತಿ ಪುಲ್ಲೈಯಗೆ ಹುಷಾರಿಲ್ಲ ಹೀಗಾಗಿ ನಲಗೊಂಡಗೆ ಚಿಕಿತ್ಸೆಗೆ ಕರೆದೊಯ್ಯುತ್ತಿರುವುದಾಗಿ ಹೇಳಿದ್ದಾಳೆ. ಈ ವೇಳೆ ಪುಲ್ಲೈಯನ ದೇಹದ ಮೇಲೆ ರಕ್ತದ ಕಲೆಗಳನ್ನು ಗಮನಿಸಿದ ಪೊಲೀಸರು ಕೂಡಲೇ ಪುಲ್ಲೈಯನ ದೇಹವನ್ನು ಒಸ್ಮಾನಿಯ ಆಸ್ಪತ್ರೆಗೆ ಸೇರಿಸುತ್ತಾರೆ. ಪುಲ್ಲೈಯನನ್ನು ಪರೀಕ್ಷಿಸಿದ ವೈದ್ಯರು ಆತ ಮೃತಪಟ್ಟಿರುವುದಾಗಿ ತಿಳಿಸಿದ್ದು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ಮಧ್ಯೆ ಪ್ರವಳಿಕ ಮತ್ತು ಉಪೇಂದ್ರನನ್ನು ಈ ಬಗ್ಗೆ ವಿಚಾರಿಸಿದಾಗ ತಾವಿಬ್ಬರು ಸೇರಿ ಪುಲ್ಲೈಯನನ್ನು ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.