ತಾಯಿಗೆ ಅಪಮಾನ; ಕತ್ತಿ ಹಿಡಿದು ಹಲ್ಲೆ ಮಾಡಲು ಕಟ್ಟಡ ಹತ್ತಿದ ಯುವಕ!
ಥಾಣೆ: ತಾಯಿಗೆ ಅಪಮಾನಿ ಕಪಾಳಕ್ಕೆ ಹೊಡೆದರು ಎಂದು ಆರೋಪಿಸಿ ಯುವಕನೋರ್ವ ಕತ್ತಿ ಹಿಡಿದು ಸೇಡು ತೀರಿಸಿಕೊಳ್ಳಲು ಬಹು ಮಹಡಿ ಕಟ್ಟಡ ಹತ್ತಿದ ಪ್ರಸಂಗ ಮಹಾರಾಷ್ಟ್ರದಲ್ಲಿ ಬುಧವಾರ ನಡೆದಿದೆ.
ಮಹಾರಾಷ್ಟ್ರದ ಥಾಣೆಯಲ್ಲಿ ಈ ಘಟನೆ ನಡೆದಿದ್ದು, ಪ್ರಸ್ತುತ ಕತ್ತಿ ಹಿಡಿದು ನೆರೆಮನೆಯವರ ಮೇಲೆ ಹಲ್ಲೆಗೆ ಮುಂದಾಗಿದ್ದ 20 ವರ್ಷದ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಥಾಣೆಯಲ್ಲಿರುವ ಭಯಂದರ್ ಪ್ರದೇಶದ ಹೌಸಿಂಗ್ ಸೊಸೈಟಿ ನಿವಾಸಿಯಾಗಿರುವ ಧೋನಿ ಗೋಪಾಲ್ ಎಂಬ ಯುವಕ ತನ್ನ ತಾಯಿ ಕಪಾಳಕ್ಕೆ ಹೊಡೆದರು ಎಂದು ಆರೋಪಿಸಿ ನೆರೆಮನೆಯಾಕೆ ಮೇಲೆ ಕತ್ತಿಯಿಂದ ಹಲ್ಲೆ ಮಾಡಲು ಮುಂದಾಗಿದ್ದ. ಈ ವೇಳೆ ಆತನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಪ್ರತ್ಯಕ್ಷ ದರ್ಶಿಗಳ ಪ್ರಕಾರ ಬಂಧಿತ ಧೋನಿ ಗೋಪಾಲ್ ತಾಯಿ ಹಾಗೂ ಅದೇ ಆಪಾರ್ಟ್ ಮೆಂಟ್ ನೆರೆಮನೆಯ ಮತ್ತೋರ್ವ ಮಹಿಳೆ ನಡುವೆ ಕ್ಷುಲ್ಲಕ ವಿಚಾರಕ್ಕೆ ಜಗಳವಾಗಿತ್ತು. ವಾಕ್ಸಮರ ತಾರಕ್ಕೇರಿ ಮಹಿಳೆ ಧೋನಿ ಗೋಪಾಲ್ ಅವರ ತಾಯಿ ಕಪಾಳಕ್ಕೆ ಹೊಡೆದಿದ್ದಾರೆ. ಈ ವಿಚಾರ ತಿಳಿದ ಮಗ ಧೋನಿ ಗೋಪಾಲ್ ಆಕ್ರೋಶಗೊಂಡು ನೆರೆಮನೆಯಾಕೆ ಮನೆಯ ಬಾಗಿಲು ಬಡಿದಿದ್ದಾನೆ. ಆದರೆ ಆಕೆ ಬಾಗಿಲು ತೆಗೆಯದ ಹಿನ್ನಲೆಯಲ್ಲಿ ಆತ ಕತ್ತಿ ಹಿಡಿದು ಕಟ್ಟಡವೇರಿ ಆಕೆಯ ಮನೆ ಏರಿ, ಗಲಾಟೆ ಮಾಡಿದ್ದಾನೆ. ಇವಿಷ್ಟೂ ದೃಶ್ಯಾವಳಿಯನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಇದೀಗ ಈ ವಿಡಿಯೋ ವೈರಲ್ ಆಗಿದೆ.
ಪ್ರಸ್ತುತ ಹಲ್ಲೆ ಆರೋಪದ ಮೇಲೆ ಥಾಣೆ ಪೊಲೀಸರು 20 ವರ್ಷದ ಧೋನಿ ಗೋಪಾಲ್ ನನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ