ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮೇಲಿನ ಭಾರತೀಯ ಸೇನೆಯ ಸೀಮಿತ ದಾಳಿ ಬಳಿಕ ಪಾಕಿಸ್ತಾನ ಸೇನೆ ಭಾರತೀಯ ಯೋಧ 22 ವರ್ಷದ ಚಂದು ಚೌವಾಣ್ ನನ್ನು ವಶಕ್ಕೆ ಪಡೆದಿದ್ದಾರೆ ಎಂಬ ಸುದ್ದಿ ಕೇಳಿ ಚಂದು ಅಜ್ಜಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಮಹಾರಾಷ್ಟ್ರದ ಧುಲೆ ಜಿಲ್ಲೆಯ ಬೋರ್ ವಿಹಿರ್ ಗ್ರಾಮದಲ್ಲಿ ವಾಸವಾಗಿರುವ ಅಜ್ಜಿ ಲೀಲಾಬಾಯಿ ಪಾಟೀಲ್ ಅವರು ಯೋಧ ಚಂದು ಅವರ ಪೋಷಕರು ಮೃತಪಟ್ಟ ಬಳಿಕ ಆತನನ್ನು ಸಾಕಿದ್ದರು. ಪಾಕ್ ವಶದಲ್ಲಿ ತಮ್ಮ ಮೊಮ್ಮೆಗ ಸಿಲುಕಿರುವ ವಿಷಯ ಕೇಳಿ ಅಜ್ಜಿ ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದಾರೆ ಎಂದು ಸಂಬಂಧಿಕರು ಹೇಳಿದ್ದಾರೆ.
ಇನ್ನು ಪಾಕಿಸ್ತಾನ ವಶದಲ್ಲಿರುವ ಚಂದು ಚೌಹಾಣ್ ಅವರ ಬಿಡುಗಡೆಗಾಗಿ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ನಿನ್ನೆ ತಿಳಿಸಿದ್ದರು. ಚಂದು ಕುಟುಂಬದೊಂದಿಗೆ ಮಾತನಾಡಿರುವ ಅವರು ಸರ್ಕಾರದಿಂದ ಕುಟುಂಬಕ್ಕೆ ಸರ್ವ ನೆರವನ್ನು ನೀಡುವ ಭರವಸೆಯನ್ನು ನೀಡಿದ್ದಾರೆ.
ಚೌಹಾಣ್ ಅವರು 37ನೇ ರಾಷ್ಟ್ರೀಯ ರೈಫಲ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಆತನ ಸಹೋದರ ಭೂಷಣ್ ಬಾಬುಲಾಲ್ ಚೌಹಾಣ್ ಗುಜರಾತಿನ 9ನೇ ಮರಾಠಿ ಲೈಟ್ ಇನ್ಫಾನ್ಟ್ರಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದಾಗಿ ಚಂದು ಸಂಬಂಧಿಕರಾದ ಅಜಿತ್ ಪಟೇಲ್ ತಿಳಿಸಿದ್ದಾರೆ.