ಬಿಡುವಿರದ ಕೆಲಸದ ಮಧ್ಯೆಯೂ ಒತ್ತಡರಹಿತವಾಗಿರುವುದು ಹೇಗೆ?: ಪ್ರಧಾನಿ ಮೋದಿ ಕೊಟ್ಟ ಉತ್ತರವಿದು

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೆಲಸದ ಬಗ್ಗೆ ಅಪಾರ ಶ್ರದ್ಧೆಯಿರುವ ವ್ಯಕ್ತಿ ಎಂದು ಇಡೀ ದೇಶದ...
ಪ್ರಧಾನ ಮಂತ್ರಿ ನರೇಂದ್ರ ಮೋದಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ
Updated on: 
ನವದೆಹಲಿ:ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೆಲಸದ ಬಗ್ಗೆ ಅಪಾರ ಶ್ರದ್ಧೆಯಿರುವ ವ್ಯಕ್ತಿ ಎಂದು ಇಡೀ ದೇಶದ ಜನತೆ ಹೇಳುತ್ತಾರೆ. ಅವರು ದಿನಕ್ಕೆ ಸುಮಾರು 18 ಗಂಟೆ ಕೆಲಸ ಮಾಡುತ್ತಾರೆ, ನಾಲ್ಕೈದು ಗಂಟೆ ಮಾತ್ರ ನಿದ್ದೆ ಮಾಡುತ್ತಾರೆ. ವಿದೇಶಗಳಿಗೆ ಪ್ರಯಾಣಿಸುವುದಿದ್ದರೆ ರಾತ್ರಿ ವೇಳೆ ವಿಮಾನದಲ್ಲಿ ಹೋಗುತ್ತಾರೆ,  ಏಕೆಂದರೆ ಹಗಲು ಹೊತ್ತು ಸಮಯ ಉಳಿಸಬಹುದು ಎಂದು ಮತ್ತು ವಿಮಾನದಲ್ಲಿ ನಿದ್ದೆ ಮಾಡಬಹುದು ಎಂಬ ಉದ್ದೇಶದಿಂದ ಎಂದೆಲ್ಲ ಮಾಧ್ಯಮಗಳಲ್ಲಿ ಕೇಳಿದ್ದೇವೆ, ಓದಿದ್ದೇವೆ.
ಮೋದಿಯವರು ಅಷ್ಟೊಂದು ಹುರುಪು, ಉತ್ಸಾಹಗಳಿಂದ ದಿನವಿಡೀ ಹೇಗೆ ಕೆಲಸ ಮಾಡುತ್ತಾರೆ, ಅವರಿಗೆ ದಣಿವಾಗುವುದಿಲ್ಲವೇ ಎಂದು ಅನೇಕರು ಯೋಚಿಸಿದ್ದುಂಟು.ನಮ್ಮಲ್ಲಿ ಬಹುಪಾಲು ಮಂದಿಗೆ ಹೆಚ್ಚು ಹೊತ್ತು ಕೆಲಸ ಮಾಡಿದರೆ ಮಾನಸಿಕ ಒತ್ತಡ, ಶಾರೀರಿಕ ಬಳಲುವಿಕೆಯಾಗುತ್ತದೆ. ಆದರೆ ಪ್ರಧಾನಿಯವರಿಗೆ ತಮ್ಮ ಕೆಲಸದಿಂದ ಒತ್ತಡವೇ ಅನಿಸುವುದಿಲ್ಲವಂತೆ. ಈ ಬಗ್ಗೆ ಅನುಯಾಯಿಯೊಬ್ಬರು ಟ್ವಿಟ್ಟರ್ ನಲ್ಲಿ ಕೇಳಿದ ಪ್ರಶ್ನೆಗೆ ಸ್ವತಃ ಪ್ರಧಾನಿಯವರೇ ಉತ್ತರ ಕೊಟ್ಟಿದ್ದಾರೆ, ಅದೀಗ ವೈರಲ್ ಆಗಿದೆ.
ಇತ್ತೀಚೆಗೆ ಟ್ವಿಟ್ಟರ್ ನಲ್ಲಿ ಒಬ್ಬರು ಪ್ರಧಾನಿಯವರ ತ್ರಾಸದಾಯಕ ದೈನಂದಿನ ವೇಳಾಪಟ್ಟಿಯ ಬಗ್ಗೆ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದರು.ಗುರುಂಗಾವ್ ನ ನೀತು ಗಾರ್ಗ್ ಎಂಬುವವರು ಟ್ವಿಟ್ಟರ್ ನಲ್ಲಿ, ನಾವು ನಮ್ಮ ಕೆಲಸದ ಒತ್ತಡದಿಂದ ಬಳಲುತ್ತಿದ್ದರೆ ಪ್ರಧಾನಿಯವರ ವೇಳಾಪಟ್ಟಿಯನ್ನೊಮ್ಮೆ ನೋಡಿ, ಅವರಿಗೆ ಇದು ಕೇವಲ ಮತ್ತೊಂದು ದಿನವಷ್ಟೆ ಎಂದು ಕಾರ್ಯಕ್ರಮದ ವೇಳಾಪಟ್ಟಿಯನ್ನು ಪೋಸ್ಟ್ ಮಾಡಿದ್ದರು.
ಆಸಕ್ತಿಕರ ವಿಷಯವೆಂಬಂತೆ ಪ್ರಧಾನಿಯವರು ಗಾರ್ಗ್ ಅವರ ಟ್ವೀಟ್ ನ್ನು ನೋಡಿ ಪ್ರತಿಕ್ರಿಯಿಸಿ, ಈ ದೇಶದ 125 ಕೋಟಿ ಭಾರತೀಯರಿಗಾಗಿ ಕೆಲಸ ಮಾಡುವುದು ಒತ್ತಡವೆನಿಸಲು ಹೇಗೆ ಸಾಧ್ಯ, ಅದು ನನಗೆ ತುಂಬಾ ತೃಪ್ತಿ ತರುತ್ತದೆ ಎಂದು ಬರೆದಿದ್ದರು.
ಮೊನ್ನೆ ಏಪ್ರಿಲ್ 10ಕ್ಕೆ ಮಾಡಿರುವ ಟ್ವೀಟ್ ಇದಾಗಿದ್ದು ಅಂದು ಪ್ರಧಾನಿಯವರಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿಯವರೊಂದಿಗೆ ಸಭೆ, ಆಸ್ಟ್ರೇಲಿಯಾ ಪ್ರಧಾನಿ ಮಾಲ್ಕೊಮ್ ಟರ್ನ್ ಬುಲ್ಲ್ ಜೊತೆ ಸಭೆ, ದೆಹಲಿ ಮೆಟ್ರೋದಲ್ಲಿ ಪ್ರಯಾಣ, ಸ್ವಚ್ಛ ಭಾರತ ಅಭಿಯಾನದ ಪ್ರದರ್ಶನದಲ್ಲಿ ಭಾಗವಹಿಸುವಿಕೆ, ಎನ್ ಡಿಎ ನಾಯಕರೊಂದಿಗೆ ಸಭೆ ಹೀಗೆ ಹಲವು ಕಾರ್ಯಕ್ರಮಗಳಿದ್ದವು. ಅಷ್ಟೆಲ್ಲಾ ಮುಗಿಸುವ ಹೊತ್ತಿಗೆ ಮಧ್ಯರಾತ್ರಿಯಾಗಿತ್ತು. 
ಪ್ರಧಾನಿಯವರು ತಮ್ಮ ಅನೇಕ ಭಾಷಣಗಳಲ್ಲಿ ಪ್ರಧಾನ ಮಂತ್ರಿ ಎಂದು ಸಂಬೋಧಿಸುವ ಬದಲು ಪ್ರಧಾನ ಸೇವಕ ಎಂದು ಹೇಳಿಕೊಳ್ಳುತ್ತಾರೆ. 2014ರ ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ದೆಹಲಿಯ ಕೆಂಪು ಕೋಟೆಯಿಂದ ಮಾಡಿದ ಭಾಷಣದಲ್ಲಿ ತಮ್ಮನ್ನು ಪ್ರಧಾನ ಮಂತ್ರಿ ಎಂದು ಕರೆಸಿಕೊಳ್ಳುವ ಬದಲಾಗಿ ಪ್ರಧಾನ ಸೇವಕ ಎಂದೇ ಸಂಬೋಧಿಸಿಕೊಂಡಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com