ಸಿಂಧೂ ನದಿ ಬಳಿ ಪಾಕ್ ನಿಂದ 6 ಅಣೆಕಟ್ಟು ನಿರ್ಮಾಣ, ಚೀನಾ ನೆರವು: ವಿದೇಶಾಂಗ ಸಚಿವಾಲಯ

ಚೀನಾ ನೆರವಿನೊಂದಿಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಸಿಂಧೂ ನದಿ ಬಳಿ ಪಾಕಿಸ್ತಾನ 6 ಅಣೆಕಟ್ಟುಗಳನ್ನು ನಿರ್ಮಾಣ ಮಾಡುತ್ತಿದೆ ಎಂದು ವಿದೇಶಾಂಗ ಸಚಿವಾಲಯ ಶುಕ್ರವಾರ ಹೇಳಿದೆ...
ಸಿಂಧೂ ನದಿ (ಸಂಗ್ರಹ ಚಿತ್ರ)
ಸಿಂಧೂ ನದಿ (ಸಂಗ್ರಹ ಚಿತ್ರ)

ನವದೆಹಲಿ: ಚೀನಾ ನೆರವಿನೊಂದಿಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಸಿಂಧೂ ನದಿ ಬಳಿ ಪಾಕಿಸ್ತಾನ 6 ಅಣೆಕಟ್ಟುಗಳನ್ನು ನಿರ್ಮಾಣ ಮಾಡುತ್ತಿದೆ ಎಂದು ವಿದೇಶಾಂಗ ಸಚಿವಾಲಯ ಶುಕ್ರವಾರ ಹೇಳಿದೆ. 

ಸಂಸತ್ತಿನಲ್ಲಿ ಮಾತನಾಡಿರುವ ವಿದೇಶಾಂಗ ವ್ಯವಹಾರಗಳ ಇಲಾಖೆಯ ರಾಜ್ಯ ಸಚಿವ ಜನರಲ್ ವಿ.ಕೆ. ಸಿಂಗ್ ಅವರು, ಸಿಂಧೂ ನದಿ ವಿಚಾರಕ್ಕೆ ಸಂಬಂಧಿಸಿದಂತೆ ಚೀನಾ ಹಲವು ಬಾರಿ ಪಾಕಿಸ್ತಾನಕ್ಕೆ ಬೆಂಬಲ ನೀಡಿದೆ. ಇದೀಗ ನದಿ ಬಳಿ ಪಾಕಿಸ್ತಾನ ಯೋಜಿಸಿರುವ 6 ಅಣೆಕಟ್ಟುಗಳ ನಿರ್ಮಾಣಕ್ಕೂ ಚೀನಾ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಿದೆ ಎಂದು ಹೇಳಿದ್ದಾರೆ. 

ಕಾಶ್ಮೀರದ ಹಲವು ಪ್ರಾಂತ್ಯಗಳನ್ನು ಪಾಕಿಸ್ತಾನ ಅಕ್ರಮವಾಗಿ ಆಕ್ರಮಿಸಿಕೊಂಡಿದೆ ಇದರಿಂದ ಭಾರತದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯ ಉಲ್ಲಂಘನೆಯಾಗಿರುವುದು ಸ್ಪಷ್ಟವಾಗುತ್ತಿದೆ. ಪಾಕಿಸ್ತಾನ ಅಕ್ರಮವಾಗಿ ಕಾಶ್ಮೀರದ ಪ್ರಾಂತ್ಯಗಳನ್ನು ಆಕ್ರಮಿಸಿಕೊಳ್ಳುತ್ತಿದೆ ಎಂಬುದನ್ನು ಭಾರತ ಈಗಾಗಲೇ ಸ್ಪಷ್ಟವಾಗಿ ಹೇಳಿದೆ. 

ಅಣೆಕಟ್ಟು ನಿರ್ಮಾಣಗಳಿಂದ ಭಾರತದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯ ಉಲ್ಲಂಘನೆಯಾಗುತ್ತದೆ ಎಂದು ಚೀನಾ ಹಾಗೂ ಪಾಕಿಸ್ತಾನಕ್ಕೆ ಸ್ಪಷ್ಟ ಮಾತುಗಳಲ್ಲಿ ಸೂಚಿಸಲಾಗಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದ್ದು, ಅಲ್ಲಿ ಪಾಕಿಸ್ತಾನ ಅಥವಾ ಚೀನಾ ನಡೆಸುವ ಯಾವುದೇ ನಿರ್ಮಾಣ ಚಟುವಟಿಕೆಗಳೂ ಭಾರತದ ಸಾರ್ವಭೌಮತೆ ಹಾಗೂ ಪ್ರಾದೇಶಿಕ ಸಮಗ್ರತೆಗೆ ಧಕ್ಕೆ ಉಂಟುಮಾಡುತ್ತದೆ. 

ನಮ್ಮ ಈ ನಿಲುವನ್ನು ರಾಜತಾಂತ್ರಿಕ ಸೂಚನೆಯ ಮೂಲಕ ಚೀನಾ ಮತ್ತು ಪಾಕಿಸ್ತಾನ ರಾಷ್ಟ್ರಗಳಿಗೆ ಸ್ಪಷ್ಟವಾಗಿ ತಿಳಿಸಲಾಗಿದೆ. ಈ ನಿಲುವನ್ನು ಸರ್ಕಾರ ಮೂಲಕ ಮುಂದುವರೆಸಿಕೊಂಡು ಹೋಗಲಿದೆ ಎಂದು ತಿಳಿಸಿದ್ದಾರೆ. 

ಭಾರತ ಮತ್ತು ಪಾಕಿಸ್ತಾನ ರಾಷ್ಟ್ರಗಳ ನಡುವೆ ಹಿಮಾಲಯದಲ್ಲಿ ಹುಟ್ಟಿ ಭಾರತದ ಪ್ರದೇಶಗಳಲ್ಲಿ ಹರಿದು ಪಾಕಿಸ್ತಾನದ ಮೂಲಕ ಅರಬ್ಬಿ ಸಮುದ್ರ ಸೇರುವ ಸಿಂಧೂ ಮತ್ತು ಅದರ ಜಲಾನಯದನ ವ್ಯಾಪ್ತಿಗೆ ಸೇರಿದ ಝೇಲಂ, ಚೀನಾಬ್, ರಾವಿ, ಬಿಯಾಸ್, ಸಟ್ಲೇಜ್ ನದಿಗಳ ನೀರನ್ನು ಹಂಚಿಕೊಳ್ಳುವುದಕ್ಕೆ ಸಂಬಂಧಪಟ್ಟಂತೆ 1960ರಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. 

ಸಿಂಧೂ ನದಿಯ ಮೂಲಗಳು ಭಾರತದಲ್ಲಿರುವುದರಿಂದ ಯುದ್ಧ ನಡೆದ ಸಂದರ್ಭದಲ್ಲಿ ನೀರು ಸ್ಥಗಿತಗೊಳಿಸುವ ಸಾಧ್ಯತೆಗಳಿವೆ. ಇದರಿಂದ ಪಾಕಿಸ್ತಾನ ಬರಗಾಲಕ್ಕೆ ತುತ್ತಾಗುವ ಸಾಧ್ಯತೆ ಇದೆ ಎನ್ನುವ ಆತಂಕವನ್ನು ಪಾಕಿಸ್ತಾನ ವ್ಯಕ್ತಪಡಿಸಿತ್ತು. ಈ ಅಂಶವನ್ನು ಮುಂದಿಟ್ಟುಕೊಂಡು ಪಾಕಿಸ್ತಾನ ಸಿಂಧೂ ನದಿ ನೀರಿನ ಹಂಚಿಕೆಯ ವಿವಾದವನ್ನು ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಸ್ತಾಪ ಮಾಡಿತ್ತು. ಇದರಂತೆ ವಿಶ್ವಬ್ಯಾಂಕ್ ಮೊರೆ ಹೋಯಿತು. ವಿಶ್ವಬ್ಯಾಂಕ್ ಮಧ್ಯಪ್ರವೇಶಿಸಿದ ಬಳಿಕ ಸಿಂಧೂ ನದಿ ಜಲ ಒಪ್ಪಂದ ಜಾರಿಯಾಯಿತು. ಇದರ ಅನ್ವಯ ಒಟ್ಟಾರೆ 5,9000 ಟಿಎಂಸಿ ಅಡಿ ನೀರು ಪಾಕಿಸ್ತಾನಕ್ಕೆ ಲಭ್ಯವಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com