ಅಮೇಥಿ(ಉ.ಪ್ರ):ಇಲ್ಲಿನ ಜೈಸ್ ಪ್ರದೇಶದ ರೊಖಾ ಗ್ರಾಮದಲ್ಲಿ 1.0360 ಹೆಕ್ಟೇರ್ ಭೂಮಿಯಲ್ಲಿರುವ ರಾಜೀವ್ ಗಾಂಧಿ ಚಾರಿಟಬಲ್ ಟ್ರಸ್ಟ್ ನ್ನು ಕೂಡಲೇ ಬಿಟ್ಟುಕೊಡಬೇಕೆಂದು ಅಮೇಥಿ ಜಿಲ್ಲಾಡಳಿತ ಆದೇಶ ನೀಡಿದೆ. ಇಲ್ಲಿ ಸ್ವಸಹಾಯ ಗುಂಪುಗಳ ಸದಸ್ಯರಿಗೆ ವೃತ್ತಿ ತರಬೇತಿಗೆಂದು ಜಾಗ ನೀಡಲಾಗಿತ್ತು.
ಆರಂಭದಲ್ಲಿ ಈ ಭೂಮಿಯನ್ನು ಸ್ವಸಹಾಯ ಗುಪುಗಳ ಸದಸ್ಯರಿಗೆ ವೃತ್ತಿಪರ ತರಬೇತಿ ನೀಡಲೆಂದು ದಾಖಲಾತಿ ಮಾಡಿಕೊಳ್ಳಲಾಗಿತ್ತು. ಆದರೆ ನಂತರದ ದಿನಗಳಲ್ಲಿ ಇದನ್ನು ರಾಜೀವ್ ಗಾಂಧಿ ಚಾರಿಟಬಲ್ ಟ್ರಸ್ಟ್ ವಶಪಡಿಸಿಕೊಂಡಿತ್ತು.
ಈ ಭೂಮಿಯ ಒಡೆತನದ ಬಗ್ಗೆ ಆರಂಭದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಪ್ರಶ್ನೆ ಮಾಡಿದ್ದರು. ನಂತರ 2014ರಲ್ಲಿ ಅಮೇಥಿಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಎದುರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಾಗ ಅವರು ಬರೆದ ಪತ್ರ ಮೂಲೆಗೆ ಸೇರಿತು.
ಅಮೇಥಿ ಸಂಸದೀಯ ಕ್ಷೇತ್ರದಲ್ಲಿ 5 ವಿಧಾನಸಭಾ ಕ್ಷೇತ್ರಗಳ ಪೈಕಿ 4 ಕ್ಷೇತ್ರಗಳು ಜಿಲ್ಲಾಡಳಿತದ ಅಧೀನಕ್ಕೆ ಬರುತ್ತದೆ. ಉತ್ತರ ಪ್ರದೇಶದಲ್ಲಿ ಈ ಹಿಂದಿನ ಅಖಿಲೇಶ್ ಯಾದವ್ ನೇತೃತ್ವದ ಸರ್ಕಾರ ಸ್ಮೃತಿ ಇರಾನಿಯವರ ಪ್ರತಿಭಟನೆಗೆ ಕಿವಿಗೊಟ್ಟಿರಲಿಲ್ಲ. ಇದೀಗ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಜಿಲ್ಲಾಡಳಿತ ಸ್ಮೃತಿ ಇರಾನಿಯವರ ಪತ್ರವನ್ನು ಗಂಭೀರವಾಗಿ ತೆಗೆದುಕೊಂಡು ಕಾರ್ಯಪ್ರವೃತ್ತವಾಗಿದೆ. ಅಮೇಥಿ ಜಿಲ್ಲಾಧಿಕಾರಿ ಯೋಗೇಶ್ ಕುಮಾರ್ ತಿಲೊಯ್ ಉಪ ವಿಭಾಗ ಮ್ಯಾಜಿಸ್ಟ್ರೇಟ್ ಅಶೋಕ್ ಕುಮಾರ್ ಶುಕ್ಲ ಅವರಿಗೆ ಈ ವಿಷಯಕ್ಕೆ ವಿಶೇಷ ಗಮನಹರಿಸುವಂತೆ ಹೇಳಿದ್ದಾರೆ.
ರಾಜೀವ್ ಗಾಂಧಿ ಟ್ರಸ್ಟ್ ಗೆ ಮೊದಲ ನೋಟಿಸ್ ನ್ನು ಜಿಲ್ಲಾ ಅಭಿವೃದ್ಧಿ ಅಧಿಕಾರಿ ಒ.ಪಿ.ಪಾಂಡೆ ಮಾರ್ಚ್ 27ರಂದು ಹೊರಡಿಸಿದ್ದರು. ನಂತರ ಏಪ್ರಿಲ್ 10ರಂದು ಮುಖ್ಯ ಅಭಿವೃದ್ಧಿ ಅಧಿಕಾರಿ ಓಮ್ ಪ್ರಕಾಶ್ ಮತ್ತು ತಿಲೊಯ್ ಉಪ ವಿಭಾಗ ಮ್ಯಾಜಿಸ್ಟ್ರೇಟ್ ಅಶೋಕ್ ಕುಮಾರ್ ಶುಕ್ಲ ಏಪ್ರಿಲ್ 28ರಂದು ನೊಟೀಸ್ ಜಾರಿ ಮಾಡಿದ್ದರು.
ಭೂಮಿಯ ಬಳಕೆ ಅಥವಾ ಮಾಲಿಕತ್ವದ ಬಗ್ಗೆ ದಾಖಲೆಗಳನ್ನು ನೀಡುವಂತೆ ಟ್ರಸ್ಟ್ ಗೆ ನೊಟೀಸ್ ನಲ್ಲಿ ಸೂಚಿಸಲಾಗಿದೆ. ಈ ಬಗ್ಗೆ ಪಿಟಿಐ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿದ ಶುಕ್ಲಾ, ಟ್ರಸ್ಟ್ ನೋಟಿಸ್ ಗೆ ಉತ್ತರಿಸಿದೆ. ಆದರೆ ಅದು ಸ್ಪಷ್ಟವಾಗಿಲ್ಲ ಮತ್ತು ವಿವರಣೆ ಸಾಕಷ್ಟು ಇಲ್ಲ ಎಂದು ಹೇಳಿದ್ದಾರೆ.
ಈ ಮಧ್ಯೆ ಸ್ವಸಹಾಯ ಗುಂಪುಗಳ ಪ್ರತಿನಿಧಿ ಕಿರಣ್ ಸಿಂಗ್ ಎಂಬುವವರು ಅಲಹಾಬಾದ್ ಹೈಕೋರ್ಟ್ ಮೊರೆ ಹೋಗಿದ್ದಾರೆ. ಅಲಹಾಬಾದ್ ಹೈಕೋರ್ಟ್ ಭೂಮಿಯ ಸ್ಥಿತಿ ವರದಿಯನ್ನು ನೀಡುವಂತೆ ಮತ್ತು ಸ್ವಸಹಾಯ ಗುಂಪುಗಳ ಚಟುವಟಿಕೆಗಳ ಬಗ್ಗೆ ವಿವರ ಕೇಳಿದೆ.
ಇನ್ನೊಂದೆಡೆ ಉಪ ವಿಭಾಗ ಮ್ಯಾಜಿಸ್ಟ್ರೇಟ್ ರಾಜೀವ್ ಗಾಂಧಿ ಟ್ರಸ್ಟ್ ಗೆ ಭೂಮಿಯ ಬಳಕೆ ಬಗ್ಗೆ ದಾಖಲೆಗಳನ್ನು ನೀಡುವಂತೆ ಸೂಚಿಸಿದ್ದಾರೆ. ಆದರೆ ಟ್ರಸ್ಟ್ ದಾಖಲೆಗಳನ್ನು ನೀಡಲು ವಿಫಲವಾದ ಹಿನ್ನೆಲೆಯಲ್ಲಿ ಕಳೆದ ವಾರ ಸ್ಥಳವನ್ನು ತೆರವುಗೊಳಿಸುವಂತೆ ಆದೇಶ ನೀಡಿದ್ದಾರೆ.
ಆದರೆ ಇದರ ಹಿಂದೆ ಕೇಂದ್ರ ಸಚಿವೆ ಸ್ಮತಿ ಇರಾನಿಯವರ ಕುತಂತ್ರವಿದೆ ಎಂದು ಜಿಲ್ಲಾ ಕಾಂಗ್ರೆಸ್ ಆರೋಪಿಸಿದೆ.ಪ್ರಸ್ತುತದ ಬೆಳವಣಿಗೆಗೆ ಸ್ಮೃತಿ ಇರಾನಿಯವರ ರಾಜಕೀಯ ದುರುದ್ದೇಶವೇ ಕಾರಣ. ಜನಪ್ರಿಯ ನಾಯಕ ರಾಹುಲ್ ಗಾಂಧಿಯವರ ಎದುರು ಕಳೆದ ಲೋಕಸಭೆ ಚುನಾವಣೆಯಲ್ಲಿ ಸೋತ ಕಾರಣ ಅದರ ಸೇಡು ತೀರಿಸಿಕೊಳ್ಳಲು ಹೀಗೆ ಮಾಡಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಮುಖ್ಯಸ್ಥ ಯೋಗೇಂದ್ರ ಮಿಶ್ರಾ ಪಿಟಿಐ ಸುದ್ದಿ ಸಂಸ್ಥೆಗೆ ಹೇಳಿದ್ದಾರೆ.