
ನವದೆಹಲಿ: 1962ರ ಯುದ್ಧದಿಂದ ಭಾರತ ಸಾಕಷ್ಟು ಪಾಠ ಕಲಿತಿದೆ. ಇಲ್ಲಿ ಕಲಿತ ಪಾಠದಿಂದಲೇ 1965 ಮತ್ತು 1971ರ ಯುದ್ಧವನ್ನು ಸಮರ್ಥವಾಗಿಯೇ ಎದುರಿಸಿ ಗೆದ್ದು ತೋರಿಸಿದ್ದೇವೆ. ಈಗ ಚೀನೀ ಪಡೆಗಳನ್ನು ಎದುರಿಸಲೂ ಕೂಡ ಭಾರತೀಯ ಸೇನೆ ಸಮರ್ಥವಾಗಿದೆ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಭಾರತ ಮತ್ತು ಚೀನಾ ದೇಶಗಳ ನಡುವಿನ ಶೀತಲ ಸಮರಕ್ಕೆ ಕಾರಣವಾಗಿರುವ ಡೊಕ್ಲಾಂ ಗಡಿ ವಿವಾದ ಸಂಬಂಧ ಚೀನಾ ಪತ್ರಿಕೆಗಳ ಕದನೋತ್ಸಾಹದ ಬರವಣಿಗೆಗಳ ಹಿನ್ನಲೆಯಲ್ಲಿ ಮಾತನಾಡಿದ ಕೇಂದ್ರ ರಕ್ಷಣಾ ಇಲಾಖೆಯ ಹೊಣೆಗಾರಿಕೆ ಹೊತ್ತಿರುವ ಅರುಣ್ ಜೇಟ್ಲಿ ಅವರು, 1962ರ ಯುದ್ಧದಿಂದ ಭಾರತ ಸಾಕಷ್ಟು ಪಾಠ ಕಲಿತಿದ್ದು, ಪ್ರಸ್ತುತ ನಮ್ಮ ಸೇನೆ ಯಾವುದೇ ಬಾಹ್ಯ ಬೆದರಿಕೆಗಳನ್ನು ಎದುರಿಸಲು ಸಮರ್ಥವಾಗಿದೆ. ನಮ್ಮ ಸೇನಾ ಪಡೆ ಪೂರ್ಣ ಪ್ರಮಾಣದ ಸಾಮರ್ಥ್ಯ ಹೊಂದಿದ್ದು, ಚೀನಾ ಸೈನಿಕರ ದಾಳಿಯನ್ನು ಸಮರ್ಥವಾಗಿ ನಿಭಾಯಿಸಲಿದೆ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ "ಕ್ವಿಟ್ ಇಂಡಿಯಾ ಚಳವಳಿಗೆ 75 ವರ್ಷದ ಸ್ಮರಣೆ'' ವೇದಿಕೆಯಲ್ಲಿ ಮಾತನಾಡಿದ ಅರುಣ್ ಜೇಟ್ಲಿ ಅವರು, "1962ರಲ್ಲಿ ಆದ ತಪ್ಪುಗಳೇ ನಾವು ಎಚ್ಚೆತ್ತುಕೊಳ್ಳುವಂತೆ ಮಾಡಿದವು. ಹೀಗಾಗಿಯೇ ನಾವು ಸೇನೆಯನ್ನು ಪೂರ್ಣ ಪ್ರಮಾಣದ ಸಾಮರ್ಥ್ಯ ಹೊಂದುವಂತೆ ಮಾಡಿದೆವು. ಈ ಮೂಲಕ 1965 ಮತ್ತು 1971ರಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಯುದ್ಧಗಳಲ್ಲಿ ಗೆದ್ದು ತೋರಿಸಿದೆವು ಎಂದು ಹೇಳಿದರು, ಅಂತೆಯೇ 1948ರಲ್ಲಿ ಪಾಕಿಸ್ತಾನ ವಶಕ್ಕೆ ಪಡೆದ ಪಾಕ್ ಆಕ್ರಮಿತ ಕಾಶ್ಮೀರವನ್ನು ಮತ್ತೆ ಭಾರತದ ಸುಪರ್ದಿಗೆ ತೆಗೆದುಕೊಳ್ಳಲು ದೇಶದ ಜನ ಬಯಸುತ್ತಿದ್ದಾರೆ. ಗಡಿಯಾಚೆಯ ಕೆಲವರು ದೇಶದ ಸಾರ್ವಭೌಮತೆ ಮತ್ತು ಸಮಗ್ರತೆಗೆ ಆಗಾಗ ಬೆದರಿಕೆಯೊಡ್ಡುತ್ತಲೇ ಇದ್ದಾರೆ. ಇವರನ್ನು ಹಿಮ್ಮೆಟ್ಟಿಸುವ ಸಾಮರ್ಥ್ಯ ಸಂಪೂರ್ಣವಾಗಿ ಭಾರತ ಸೇನೆಗೆ ಇದೆ ಎಂದು ಹೇಳಿದ್ದಾರೆ.
ಪಾಕಿಸ್ತಾನದ ವಶದಲ್ಲಿರುವ ಕಾಶ್ಮೀರವನ್ನು ನಾವು ಮರೆತಿದ್ದೇವೆ ಎಂದು ಅವರು ಭಾವಿಸಿದ್ದಾರೆ. ಆದರೆ ಆ ಪ್ರದೇಶ ಭಾರತದ್ದೇ ಎಂಬುದು ಅವರಿಗೆ ನೆನಪಿರಬೇಕು ಎಂದು ಜೇಟ್ಲಿ ಪರೋಕ್ಷವಾಗಿ ಚೀನಾ ಮತ್ತು ಪಾಕಿಸ್ತಾನಕ್ಕೆ ತಿವಿದರು.
Advertisement