ಸಿಕ್ಕಿಂ, ಅರುಣಾಚಲ ಪ್ರದೇಶದ ಚೀನಾ ಗಡಿಯಲ್ಲಿ ಹೆಚ್ಚಿನ ಭಾರತೀಯ ಪಡೆಗಳ ನಿಯೋಜನೆ!

ಡೋಕ್ಲಾಮ್ ಗಡಿ ವಿವಾದ ಸಂಬಂಧ ಭಾರತದ ವಿರುದ್ಧ ಯುದ್ಧೋತ್ಸಾಹ ತೋರುತ್ತಿರುವ ಚೀನಾ ಬಿಕ್ಕಟ್ಟು ಎದುರಾದಾಗಿನಿಂದಲೂ ಒಂದಲ್ಲ ಒಂದು ರೀತಿ ಭಾರತಕ್ಕೆ ಬೆದರಿಕೆಯೊಡ್ಡುವ ಪ್ರಯತ್ನಗಳನ್ನು ಮಾಡುತ್ತಲೇ ಇದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಡೋಕ್ಲಾಮ್ ಗಡಿ ವಿವಾದ ಸಂಬಂಧ ಭಾರತದ ವಿರುದ್ಧ ಯುದ್ಧೋತ್ಸಾಹ ತೋರುತ್ತಿರುವ ಚೀನಾ ಬಿಕ್ಕಟ್ಟು ಎದುರಾದಾಗಿನಿಂದಲೂ ಒಂದಲ್ಲ ಒಂದು ರೀತಿ ಭಾರತಕ್ಕೆ ಬೆದರಿಕೆಯೊಡ್ಡುವ ಪ್ರಯತ್ನಗಳನ್ನು ಮಾಡುತ್ತಲೇ ಇದೆ. ಇದೀಗ ಚೀನಾದ ಬೆದರಿಕೆಗಳಿಗೆ ಸೆಡ್ಡು ಹೊಡೆದಿರುವ ಭಾರತ, ವಿವಾದಿತ ಗಡಿಯಲ್ಲಿ ಭಾರೀಯ ಸೇನೆಯನ್ನು ನಿಯೋಜಿಸಿದೆ ಎಂದು ತಿಳಿದುಬಂದಿದೆ. 
ಚೀನಾಕ್ಕೆ ಹೊಂದಿಕೊಂಡಿರುವ ಸಿಕ್ಕಿಂನಿಂದ ಅರುಣಾಚಲಪ್ರದೇಶದವರೆಗಿನ ಗಡಿ ಪ್ರದೇಶದಲ್ಲಿ ಭಾರತ ತನ್ನ ಸೇನಾ ಜಮಾವಣೆಯನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿದೆ ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ. 
ವಿವಾದಿತ ಡೋಕ್ಲಾಮ್ ಪ್ರದೇಶದಿಂದ ಭಾರತ ಹಿಂದಕ್ಕೆ ಸರಿಯದೇ ಹೋದಲ್ಲಿ, ಯಾವುದೇ ಕ್ರಮಕ್ಕೆ ನಾವು ಸಿದ್ಧ ಎಂದು ಚೀನಾ ಪದೇ ಪದೇ ಬೆದರಿಕೆಗಳನ್ನು ಹಾಕುತ್ತಿರುವ ಬೆನ್ನಲ್ಲೇ, ಭಾರತ ಈ ದಿಟ್ಟ ನಿರ್ಧಾರ ಕೈಗೊಂಡಿದೆ. ಈ ಮೂಲಕ ಚೀನಾದ ಯಾವುದೇ ಬೆದರಿಕೆಗೆ ನಾವು ಜಗ್ಗುವುದಿಲ್ಲ ಎಂಬ ಸಂದೇಶವನ್ನು ರವಾನಿಸಿದೆ. 
ಡೋಕ್ಲಾಮ್'ನಿಂದ ಭಾರತೀಯ ಯೋಧರನ್ನು ಹಿಂದಕ್ಕೆ ಕಳುಹಿಸಲು ಭಾರತದ ಮೇಲೆ ಸೀಮಿತ ದಾಳಿಕೆ ಚೀನಾ ಸಜ್ಜಾಗುತ್ತಿದೆ ಎಂಬ ಮಾಹಿತಿ ನಡುವೆಯೇ, ಈ ಮಹತ್ವದ ಬೆಳವಣಿಗೆ ನಡೆದಿದೆ ಎಂದು ಉನ್ನತ ಸೇನಾ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. 
ಸಿಕ್ಕಿಂನಿಂದ ಅರುಣಾಚಲ ಪ್ರದೇಶದವರೆಗಿನ ಗಡಿಯಲ್ಲಿ ಜಮಾವಣೆ ಗೊಂಡಿರುವ ಯೋಧರ ಸಂಖ್ಯೆಯನ್ನು ಮೂಲಗಳು ಬಹಿರಂಗಪಡಿಸಿಲ್ಲವಾದರೂ, ಜಮಾವಣೆ ಹೆಚ್ಚಿರುವುದನ್ನು ಸೇನೆಯ ಮೂಲಗಳು ಖಚಿತಪಡಿಸಿವೆ ಎಂದು ವರದಿಗಳು ತಿಳಿಸಿವೆ. 
ಡೋಕ್ಲಾಮ್ ನಿಂದ 35 ಕಿ.ಮೀ. ದೂರದಲ್ಲಿರುವ ನಾಥಾಂಗ್ ನಿಂದ ಸಾರ್ವಜನಿಕರನ್ನು ತೆರವುಗೊಳಿಸುವಂತೆ ಭಾರತೀಯ ಸೇನೆ ಆದೇಶಿಸಿದೆ ಎಂಬ ಸುದ್ದಿ ಬೆನ್ನಲ್ಲೇ ಈ ಸ್ಫೋಟಕ ಸುದ್ದಿ ಹೊರಬಿದ್ದಿದೆ. 
ಡೋಕ್ಲಾಮ್ ಬಿಕ್ಕಟ್ಟು ಆರಂಭವಾದಾಗಿನಿಂದಲೂ ಪದೇ ಪದೇ ಚೀನಾ ಯುದ್ಧದ ಮಾತುಗಳನ್ನು ಆಡಿದ್ದರೂ, ಭಾರತ ಮಾತ್ರ ಅತ್ಯಂತ ಸಂಯವನ್ನು ಕಾಯ್ದುಕೊಂಡೇ ಬರುತ್ತಿದೆ. ಆದರೆ, ಇದೀಗ ಪರಿಸ್ಥಿತಿ ಬಿಗುವಿನಿಂದ ಕೂಡಿದ್ದನ್ನು ಗಂಭೀರವಾಗಿ ಪರಿಗಣಿಸಿರುವ ಭಾರತ, ಯಾವುದೇ ಪರಿಸ್ಥಿತಿ ಎದುರಿಸಲು ಗಡಿಯಲ್ಲಿ ಸೇನೆಯ ಜಮಾವಣೆಯನ್ನು ಹೆಚ್ಚಿಸಿದೆ ಎಂದು ವಿಶ್ಲೇಷಿಸಲಾಗಿದೆ. 
ಕಳೆದ 2 ತಿಂಗಳಿನಿಂದಲೂ ಗಡಿಯಲ್ಲಿ ನಿರ್ಮಾಣವಾಗಿರುವ ಉದ್ವಿಗ್ನ ಸ್ಥಿತಿಯ ಬಗ್ಗೆ ಗುಪ್ತಚರ ಸಂಸ್ಥೆಗಳು ಮತ್ತು ಸೇನೆಯಿಂದ ಮಾಹಿತಿ ಸಂಗ್ರಹಿಸಿದ ಸರ್ಕಾರ, ಅಂತಿಮವಾಗಿ 1400 ಕಿ.ಮೀ ಉದ್ಧವಿರುವ ಸಿಕ್ಕಿಂನಿಂದ ಅರುಣಾಚಲ ಪ್ರದೇಶದವರೆಗೂ ಚೀನಾ ಗಡಿಯಲ್ಲಿ ಸೇನೆಯ ಜಮಾವಣೆಯನ್ನು ಹೆಚ್ಚಿಸಲು ನಿರ್ಧರಿಸಿತ್ತು ಎಂದು ವರದಿಗಳು ತಿಳಿಸಿವೆ. 
ಸುಖ್ನಾದಲ್ಲಿ ನೆಲೆ ಹೊಂದಿರುವ 33 ಕಾರ್ಪ್ಸ್ ಮತ್ತು ಅರುಣಾಚಲಪ್ರದೇಶ ಮತ್ತು ಅಸ್ಸಾಂನಲ್ಲಿ 3 ಮತ್ತು 4ನೇ ಕಾರ್ಪ್ಸ್ ಸಾಮಾನ್ಯವಾಗಿ ಸಿಕ್ಕಿಂ ಮತ್ತು ಅರುಣಾಚಲಪ್ರದೇಶದಲ್ಲಿ ಭಾರತದ ಗಡಿಯನ್ನು ಕಾಯುವ ಹೊಣಿ ಹೊಂದಿರುತ್ತದೆ. ಇದೇ ಪಡೆಗಳ ಯೋಧರನ್ನು ಇದೀಗ ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ. 
ಸಿಕ್ಕಿಂ ಮತ್ತು ಅರುಣಾಚಲ ಗಡಿ ಪ್ರದೇಶಗಳು ಅತ್ಯಂತ ಎತ್ತರದ ಪ್ರದೇಶದಲ್ಲಿ ಇರುವ ಕಾರಣ, ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವುದು ಯೋಧರಿಗೆ ಅಷ್ಟು ಸುಲಭದ ಕೆಲಸವಲ್ಲ. ಹೀಗಾಗಿ ಈ ಪ್ರದೇಶದಲ್ಲಿ ಯಾವುದೇ ಸಮಯದಲ್ಲಿ ಕಾರ್ಯನಿರ್ವಹಿಸಲು ಅನುವಾಗುವಂತೆ 45000 ಯೋಧರನ್ನು ಸದಾ ಸನ್ನದ್ಧ ಸ್ಥಿತಿಯಲ್ಲಿ ಇಟ್ಟಿರಲಾಗಿರುತ್ತದೆ. ಆದರೆ, ಅವರೆಲ್ಲರನ್ನೂ ಗಡಿಗೆ ಕಳುಹಿಸಿರುವುದಿಲ್ಲ ಎಂದು ತಜ್ಞರು ಮಾಹಿತಿ ನೀಡಿದ್ದಾರೆ. 
ಗಡಿಯಲ್ಲಿ ಸೇನಾ ಜಮಾವಣೆಯಲ್ಲೂ ಮತ್ತೆ ಸಂಯಮ ಪ್ರದರ್ಶಿಸಿಸುವ ಭಾರತೀಯ ಸೇನೆ, ಡೋಕ್ಲಾಮ್ ಪ್ರದೇಶದಲ್ಲಿ ನಿಯೋಜಿತ ಯೋಧರ ಸಂಖ್ಯೆಯಲ್ಲಿ ಯಥಾಸ್ಥಿತಿ ಕಾಪಾಡಿಕೊಂಡಿದೆ. ಕಳೆದ 8 ವಾರಗಳಿಂದ ಡೋಕ್ಲಾಮ್ ನಲ್ಲಿ 350 ಭಾರತೀಯ ಯೋಧರು ಬೀಡಿ ಬಿಟ್ಟಿದ್ದು, ಈಗಲೂ ಅಲ್ಲಿ ಅಷ್ಟೋ ಯೋಧರಿದ್ದಾರೆಂದು ಎಂದು ವರದಿಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com