ಚಂಡೀಘಡ: ಅತ್ಯಾಚಾರ ಪ್ರಕರಣ ಸಂಬಂಧ ಬಾಬಾ ರಾಮ್ ರಹೀಂಗೆ ಸೋಮವಾರ ಶಿಕ್ಷೆ ಪ್ರಮಾಣ ಪ್ರಕಟವಾಗಲಿದ್ದು, ಬಾಬಾ ರಾಮ್ ರಹೀಂ ಇರುವ ರೋಹ್ಟಕ್ ಜೈಲಿನಲ್ಲೇ ಶಿಕ್ಷೆ ಪ್ರಮಾಣ ಪ್ರಕಟಿಸಲು ನಿರ್ಧರಿಸಲಾಗಿದೆ.
ಶುಕ್ರವಾರ ತೀರ್ಪು ಹೊರಬಿದ್ದ ಬಳಿಕ ಉಂಟಾದ ಗಲಭೆ-ಹಿಂಸಾಚಾರ ಮತ್ತೆ ಮರುಕಳಿಸದಿರಲಿ ಎಂದು ಶಿಕ್ಷೆಯ ಪ್ರಮಾಣವನ್ನು ಜೈಲಿನಲ್ಲೇ ಪ್ರಕಟಿಸಲು ಸಿಬಿಐ ನ್ಯಾಯಾಲಯ ನಿರ್ಧರಿಸಿದೆ. ಹೀಗಾಗಿ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಸೋಮವಾರ ರೋಹ್ಟಕ್ ಜೈಲಿಗೆ ತೆರಳಿ ರಾಮ್ ರಹೀಮ್ ಗೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದ್ದಾರೆ. ಈಗಾಗಲೇ ಶಿಕ್ಷೆ ಪ್ರಮಾಣ ಪ್ರಕಟಕ್ಕೆ ರೋಹ್ಟಕ್ ಜೈಲಿನಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಜೈಲಿಗೆ ಭಾರಿ ಭದ್ರತೆ ಒದಗಿಸಲಾಗಿದೆ.
ರೋಹ್ಟಕ್ ಜೈಲಿಗೆ ಏಳು ಸುತ್ತಿನ ಭದ್ರತೆ
ರಾಮ್ ರಹೀಮ್‌ನನ್ನು ಇರಿಸಿರುವ ರೋಹ್ಟಕ್ ಜೈಲಿಗೆ ಏಳು ಸುತ್ತಿನ ಭದ್ರತೆ ಒದಗಿಸಲಾಗಿದೆ. ಶುಕ್ರವಾರದ ರೀತಿಯಲ್ಲಿ ಹಿಂಸಾಚಾರ ಮರುಕಳಿಸದಂತೆ ಎಲ್ಲಾ ರೀತಿಯ ಎಚ್ಚರವನ್ನೂ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ರೋಹ್ಟಕ್ ಜೈಲಿನ 5 ಕಿ.ಮೀ ಆವರಣದಲ್ಲಿ ಸೇನಾಪಡೆಗಳನ್ನು ನಿಯೋಡಜಿಸಲಾಗಿದ್ದು, ಅಶ್ರುವಾಯುದಳ, ಜಲಫಿರಂಗಿ ದಳ, ಹಾಗೂ ತುರ್ತು ಪ್ರಹಾರ ದಳಗಳನ್ನು ನಿಯೋಜಿಸಲಾಗಿದೆ. ಇದಲ್ಲದೆ ಯಾವುದೇ ರೀತಿಯ ಪರಿಸ್ಥಿತಿ ನಿಭಾವಣೆಗೆ ಸೇನೆ ಸಕಲ ಸನ್ನದ್ಧವಾಗಿದೆ. ಏತನ್ಮಧ್ಯೆ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಯಾವುದೇ ರೀತಿಯ ಕಠಿಣ ಕ್ರಮಗಳನ್ನು ಕೈಗೊಳ್ಳಿ ಎಂದು ಹರ್ಯಾಣ ಸರ್ಕಾರ ಪೊಲೀಸರಿಗೆ ಸೂಚಿಸಿದ್ದು, ಹರ್ಯಾಣ ಪೊಲೀಸ್ ವರಿಷ್ಢಾಧಿಕಾರಿಗಳು ಕೂಡ ಕಠಿಣ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
Advertisement