

ನವದೆಹಲಿ: ತೀವ್ರ ಕುತೂಹಲ ಕೆರಳಿಸಿದ್ದ 3 ರಾಜ್ಯಗಳ 4 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿಗೆ 2, ಆಪ್ ಗೆ 1 ಹಾಗೂ ಟಿಡಿಪಿ 1 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ.
ಭಾರಿ ಚರ್ಚೆಗೆ ಕಾರಣವಾಗಿದ್ದ ಗೋವಾದ ಪಣಜಿ ವಿಧಾನಸಭಾ ಕ್ಷೇತ್ರದ ಉಪ ಚುನವಾವಣೆಯಲ್ಲಿ ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರು ಜಯ ಸಾಧಿಸಿದ್ದು, ಪರಿಕ್ಕರ್ ಅವರು 4803 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಗಿರೀಶ್ ರಾಯ ಚೋಡ್ನಾಕರ್ ಅವರು 2,252 ಮತಗಳನ್ನು ಮಾತ್ರ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಅಂತೆಯೇ ಇದೇ ಗೋವಾದ ಮತ್ತೊಂದು ವಿಧಾನಸಭಾ ಕ್ಷೇತ್ರ ವಲ್ಪೋಯಿಯಲ್ಲಿ ಬಿಜೆಪಿಯ ವಿಶ್ವಜಿತ್ ರಾಣೆ ಅವರೂ ಗೆಲುವು ಸಾಧಿಸಿದ್ದು, ರಾಣೆ ಅವರು ಒಟ್ಟು 10,066 ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಇನ್ನು ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ದೆಹಲಿಯ ಬಾವನಾ ಕ್ಷೇತ್ರದಲ್ಲಿ ಅಚ್ಚರಿ ಎಂಬಂತೆ ಆಪ್ ಅಭ್ಯರ್ಥಿ ರಾಮಚಂದರ್ ಅವರು ಭರ್ಜರಿ ಜಯ ಸಾಧಿಸಿದ್ದು, ತಮ್ಮ ಸಮೀಪದ ಸ್ಪರ್ಧಿ ಕಾಂಗ್ರೆಸ್ ನ ಸುರೇಂದರ್ ಕುಮಾರ್ ಅವರನ್ನು ಒಟ್ಟು 24052 ಮತಗಳ ಅಂತರದಿಂದ ಮಣಿಸಿದ್ದಾರೆ. ಆಪ್ ನ ರಾಮಚಂದರ್ ಅವರಿಗೆ ಒಟ್ಟು 59,886 ಮತಗಳು ಬಿದ್ದಿದ್ದು, ಕಾಂಗ್ರೆಸ್ ನ ಸುರೇಂದರ್ ಕುಮಾರ್ ಅವರು, 31,919 ಮತಗಳನ್ನು ಪಡೆದಿದ್ದಾರೆ. ಇನ್ನು ಬಿಜೆಪಿಯ ವೇದ ಪ್ರಕಾಶ್ ಅವರು 35834 ಮತಗಳನ್ನು ಪಡೆದಿದ್ದಾರೆ.
ಇನ್ನು ಆಂಧ್ರ ಪ್ರದೇಶದಲ್ಲಿ ಟಿಡಿಪಿ ಮತ್ತು ವೈಎಸ್ ಆರ್ ಕಾಂಗ್ರೆಸ್ ಪಕ್ಷಗಳ ನಡುವಿನ ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದ್ದ ನಂದ್ಯಾಲ್ ಕ್ಷೇತ್ರದಲ್ಲಿ ಆಡಳಿತಾರೂಢ ತೆಲುಗು ದೇಶಂ ಪಕ್ಷದ ಅಭ್ಯರ್ಥಿ ಭೂಮಾ ಬ್ರಹ್ಮಾನಂದ ರೆಡ್ಡಿ ಭರ್ಜರಿ ಗೆಲುವು ಸಾಧಿಸಿದ್ದು, ತಮ್ಮ ಪ್ರತಿಸ್ಪರ್ಧಿ ವೈಎಸ್ ಆರ್ ಕಾಂಗ್ರೆಸ್ ನ ಶಿಲ್ಪಾ ಚಂದ್ರ ಮೋಹನ್ ರೆಡ್ಡಿ ವಿರುದ್ಧ ಒಟ್ಟು 27,466 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಒಟ್ಟಾರೆ 3 ರಾಜ್ಯಗಳ ಉಪಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷ ಹಿನ್ನಡೆ ಅನುಭವಿಸಿದ್ದು, ಗೋವಾದಲ್ಲಿ 2 ಸ್ಥಾನ ಗೆಲ್ಲುವ ಮೂಲಕ ಬಿಜೆಪಿ ಸಮಾಧಾನ ಪಟ್ಟುಕೊಂಡಿದೆ. ಆದರೆ ದೆಹಲಿಯಲ್ಲಿ ಸೋಲುವ ಭೀತಿ ಎದುರಿಸುತ್ತಿದ್ದ ಆಡಳಿತಾರೂಢ ಆಪ್ ಪಕ್ಷ ಮಾತ್ರ ಭರ್ಜರಿ ಗೆಲುವು ಸಾಧಿಸುವ ಮೂಲಕ ದೆಹಲಿಯಲ್ಲಿ ತನ್ನ ವರ್ಚಸ್ಸು ಹೆಚ್ಚಿಸಿಕೊಂಡಿದೆ. ಅಂತೆಯೇ ಆಂಧ್ರ ಪ್ರದೇಶದಲ್ಲಿ ಚುನಾವಣಾ ಆಯೋಗ ವಿಧಿಸಿದ್ದ ಖರ್ಚಿನ ಮಿತಿ ಮೀರಿದ ಆರೋಪ ಎದುರಿಸುತ್ತಿದ್ದ ಟಿಡಿಪಿ ಅಭ್ಯರ್ಥಿ ಆರೋಪದ ಹೊರತಾಗಿಯೂ ಗೆಲುವು ಸಾಧಿಸುವ ಮೂಲಕ ತಮ್ಮ ಪ್ರತಿಷ್ಠೆ ಉಳಿಸಿಕೊಂಡಿದ್ದಾರೆ.