ಗಾಯದ ಮೇಲೆ ಬರೆ: ಆಸ್ಪತ್ರೆ ರೋಗಿಗಳ ಮೇಲೆ ಹರಿದ ವೈದ್ಯನ ಕಾರು!

ಕಾಯಿಲೆ ಗುಣಪಡಿಸಿಕೊಳ್ಳಲೆಂದು ಆಸ್ಪತ್ರೆಗೆ ಬಂದಿದ್ದ ರೋಗಿಗಳ ಮೇಲೆ ವೈದ್ಯರ ಕಾರು ಹರಿದಿರುವ ಘಟನೆಯೊಂದು ಹೈದರಾಬಾದ್'ನ ಒಸ್ಮಾನಿಯಾ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಹೈದರಾಬಾದ್: ಕಾಯಿಲೆ ಗುಣಪಡಿಸಿಕೊಳ್ಳಲೆಂದು ಆಸ್ಪತ್ರೆಗೆ ಬಂದಿದ್ದ ರೋಗಿಗಳ ಮೇಲೆ ವೈದ್ಯರ ಕಾರು ಹರಿದಿರುವ ಘಟನೆಯೊಂದು ಹೈದರಾಬಾದ್'ನ ಒಸ್ಮಾನಿಯಾ ಜನರಲ್ ಆಸ್ಪತ್ರೆಯ ಆವರಣದಲ್ಲಿ ಗುರುವಾರ ನಡೆದಿದೆ. 
ಇಂದು ಬೆಳಿಗ್ಗೆ 8.30ರ ಸುಮಾರಿಗೆ ಘಟನೆ ನಡೆದಿದೆ. ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜರಿ ವಿಭಾಗಕ್ಕೆ ಸೇರಿದ ವೈದ್ಯ ಡಾ. ರೆಹನಾ ಖುರೇಷಿಯವರು ಕಾರು ಪಾರ್ಕಿಂಗ್ ಮಾಡುವಂತೆ ಭದ್ರತಾ ಸಿಬ್ಬಂದಿಗೆ ಕೀ ಕೊಟ್ಟಿದ್ದಾರೆ. ವೈದ್ಯರ ಸೂಚನೆಯಂತೆ ಭದ್ರತಾ ಸಿಬ್ಬಂದಿ ಶಿವರಾಜ್ ಅವರು ಕಾರು ಪಾರ್ಕಿಂಗ್ ಮಾಡಲು ಹೋಗಿದ್ದಾರೆ. ಚಾಲನೆ ಮಾಡುತ್ತಿದ್ದ ವೇಳೆ ಸಿಬ್ಬಂದಿ ಕಾರಿನ ಮೇಲಿದ್ದ ನಿಯಂತ್ರಣವನ್ನು ಕಳೆದುಕೊಂಡಿದ್ದಾರೆ. 
ಪರಿಣಾಮ ಚಿಕಿತ್ಸೆಗೆಂದು ಕಾದು ಕುಳಿದಿದ್ದ ಇಬ್ಬರು ರೋಗಿಗಳ ಮೇಲೆ ಕಾರು ಹರಿದಿದೆ. ಘಟನೆಯಲ್ಲಿ 55 ವರ್ಷದ ಮಹಿಳೆ ಹಾಗೂ 85 ವರ್ಷದ ವೃದ್ಧ ಗಂಭೀರವಾಗಿ ಗಾಯಗೊಂಡಿದ್ದಾರೆ. 
ಗಾಯಾಳುಗಳನ್ನು ಖ್ವಾಮರ್ ಬೇಗಂ ಹಾಗೂ ಎಂ.ಡಿ. ಒಮರ್ ಎಂದು ಗುರ್ತಿಸಲಾಗಿದೆ. ಕಾಲುಗಳ ನೋವಿನಿಂದ ಬಳಲುತ್ತಿದ್ದ ಖ್ವಾಮರ್ ಬೇಗಂ ಅವರು, ಚಿಕಿತ್ಸೆ ಪಡೆಯುವ ಸಲುವಾಗಿ ಆಸ್ಪತ್ರೆಗೆ ಬಂದಿದ್ದರು. ಕಾರು ಹರಿದ ಪರಿಣಾಮ ಇದೀಗ ಅವರ ಎರಡೂ ಕಾಲುಗಳ ಮೂಳೆಗಳು ಮುರಿದಿವೆ. ಅಲ್ಲದೆ, ತಲೆಗೆ ಗಂಭೀರವಾದ ಗಾಯವಾದಿಗೆ ಎಂದು ತಿಳಿದುಬಂದಿದೆ. 
ಎಂ.ಡಿ. ಒಮರ್ ಅವರು ಐಡಿಪಿಎಲ್ ನಿವೃತ್ತ ಉದ್ಯೋಗಿಯಾಗಿದ್ದು, ಹೃದಯ ಸ್ತಂಭನ ಕುರಿತಂತೆ ಪರೀಕ್ಷೆ ಮಾಡಿಸಿಕೊಳ್ಳಲು ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ಸುಂಟರಗಾಳಿಯಂತೆ ಕಾರು ನುಗ್ಗಿತ್ತು. ಘಟನೆ ವೇಳೆ ಸ್ಥಳದಲ್ಲಿ ಏನಾಗುತ್ತಿದೆ ಎಂಬುದು ಅರಿವಿಗೆ ಬರಲಿಲ್ಲ. ಒಮರ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಒಮರ್ ಅವರ ಸಂಬಂಧಿ ಇಕ್ಬಾಲ್ ಅವರು ಹೇಳಿಕೊಂಡಿದ್ದಾರೆ. 
ಘಟನೆಯ ಸಂಪೂರ್ಣ ದೃಶ್ಯ ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com