ನವದೆಹಲಿ: ಉಧಾಂಪುರ್ ಮತ್ತು ಗುರುದಾಸ್ಪುರ್ ಉಗ್ರ ದಾಳಿಯ ನಂತರವೂ ಆಹ್ವಾನವಿಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದು ಏಕೆ? ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಸೋಮವಾರ ಪ್ರಶ್ನಿಸಿದ್ದಾರೆ.
ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ಜತೆಗೂಡಿ ಪಾಕಿಸ್ತಾನ ಹಸ್ತಕ್ಷೇಪ ಮಾಡಿದೆ ಎಂಬ ಪ್ರಧಾನಿ ಮೋದಿ ಆರೋಪಕ್ಕೆ ಇಂದು ಪ್ರತಿಕ್ರಿಯಿಸಿರುವ ಮಾಜಿ ಪ್ರಧಾನಿ, ಗುಜರಾತ್ ಚುನಾವಣೆಯಲ್ಲಿ ಸೋಲಿನ ಭೀತಿಯಿಂದಾಗಿ ನರೇಂದ್ರ ಮೋದಿ ಈ ರೀತಿಯ ಆಧಾರ ರಹಿತ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಎರಡು ಉಗ್ರ ದಾಳಿಯ ನಂತರವೂ ಪ್ರಧಾನಿ ಮೋದಿ ಆಹ್ವಾನವಿಲ್ಲದೆ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದನ್ನು ನೆನಪಿಸಿದ ಮನಮೋಹನ್ ಸಿಂಗ್ ಅವರು, ತನಿಖೆಗಾಗಿ ಪಠಾಣ್ ಕೋಟ್ ವಾಯುನೆಲೆಗೆ ಪಾಕಿಸ್ತಾನದ ಕುಖ್ಯಾತ ಐಎಸ್ಐಗೆ ಅನುಮತಿ ನೀಡಿದ್ದು ಏಕೆ? ಎಂಬುದನ್ನು ದೇಶದ ಜನತೆಗೆ ಪ್ರಧಾನಿ ಮೋದಿ ಉತ್ತರಿಸಬೇಕಿದೆ ಎಂದಿದ್ದಾರೆ.
ರಾಜಕೀಯ ಲಾಭಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಆಧಾರ ರಹಿತ ಆರೋಪಗಳನ್ನು ಮಾಡುತ್ತಿದ್ದು, ಇದರಿಂದ ತಮಗೆ ತುಂಬಾ ನೋವಾಗಿದೆ. ಮಣಿಶಂಕರ್ ಅಯ್ಯರ್ ಆಯೋಜಿಸಿದ್ದ ಔತಣಕೂಟದಲ್ಲಿ ಗುಜರಾತ್ ರಾಜಕೀಯದ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎಂದು ಸಿಂಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ರೀತಿಯ ಆರೋಪಗಳನ್ನು ಮಾಡುವುದು ಸರಿಯಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿರುವ ಮೋದಿಯವರು ಈ ರೀತಿ ಹೇಳಿಕೆಗಳನ್ನು ನೀಡಿ ಜನರನ್ನು ದಿಕ್ಕು ತಪ್ಪಿಸಬಾರದು ಎಂದು ಮನಮೋಹನ್ ಸಿಂಗ್ ಹೇಳಿದ್ದಾರೆ.
ಮೋದಿ ತಮ್ಮ ಈ ಹೇಳಿಕೆ ಬಗ್ಗೆ ದೇಶದ ಜನರ ಕ್ಷಮೆ ಕೇಳುತ್ತಾರೆ ಎಂಬ ವಿಶ್ವಾಸವಿದೆ. ಈ ಮೂಲಕ ಅವರು ತಮ್ಮ ಹುದ್ದೆ ಹಾಗೂ ಪ್ರಧಾನಮಂತ್ರಿ ಕಾರ್ಯಾಲಯದ ಘನತೆಯನ್ನು ಕಾಪಾಡುತ್ತಾರೆ ಎಂದು ನಂಬಿದ್ದೇನೆ ಎಂದಿದ್ದಾರೆ.
ಇದಕ್ಕೂ ಮುನ್ನ ಕಾಂಗ್ರೆಸ್ ನಾಯಕರು ಕೂಡ ಮೋದಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದು, ಸಾಮಾಜಿಕ ಕಾರ್ಯಕ್ರಮವೊಂದಲ್ಲಿ ಪಾಕಿಸ್ತಾನದ ಸೇನಾ ನಾಯಕರು, ಅಧಿಕಾರಿಗಳು, ನಿಯೋಗದ ಅಧಿಕಾರಿಗಳು ಭಾಗವಹಿಸಿದ್ದರು. ಇದರಲ್ಲಿ ಕೆಲವು ಕಾಂಗ್ರೆಸ್ ನಾಯಕರೂ ಭಾಗವಹಿಸಿದ್ದರು ಎಂದು ಸ್ಪಷ್ಟಪಡಿಸಿದ್ದರು.
ಕಾಂಗ್ರೆಸ್‌ನ ಕೆಲವು ನಾಯಕರು ಪಾಕಿಸ್ತಾನದ ವಿದೇಶಾಂಗ ಸಚಿವರನ್ನು ಭೇಟಿ ಮಾಡಿದ್ದರು. ಆ ನಂತರ ಮಣಿಶಂಕರ್ ಅಯ್ಯರ್ ನೀಚ ಹೇಳಿಕೆ ನೀಡಿದ್ದರು ಎಂದು ಮೋದಿ ಆರೋಪಿಸಿದ್ದರು. ಅಲ್ಲದೆ ಮೂರು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಪಾಕಿಸ್ತಾನದ ರಾಯಭಾರಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಾಜಿ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಭಾಗವಹಿಸಿದ್ದರು ಎಂದು ಮೋದಿ ಹೇಳಿಕೆ ನೀಡಿದ್ದರು.