ಮಸೂದ್ ನಿರ್ಬಂಧಕ್ಕೆ ಚೀನಾ ಅಡ್ಡಗಾಲು: ಭಾರತದ ತೀವ್ರ ಅಸಮಾಧಾನ
ನವದೆಹಲಿ: ಪಠಾಣ್ ಕೋಟ್ ವಾಯುನೆಲೆ ಮೇಲಿನ ದಾಳಿಯ ಸಂಚುಕೋರ, ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಮೇಲೆ ವಿಶ್ವಸಂಸ್ಥೆಯು ನಿರ್ಬಂಧ ಹೇರುವ ಪ್ರಸ್ತಾವಕ್ಕೆ ಚೀನಾ ತಡೆ ಒಡ್ಡಿರುವುದಕ್ಕೆ ಭಾರತ ಗುರುವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಮಸೂದ್ ನನ್ನು ವಿಶ್ವಸಂಸ್ಥೆಯ ಭಯೋತ್ಪಾದಕರ ಪಟ್ಟಿಗೆ ಸೇರ್ಪಡೆ ಮಾಡುವ ಮೂರನೇ ಪ್ರಯತ್ನಕ್ಕೂ ಚೀನಾ ಮತ್ತೆ ಅಡ್ಡಗಾಲು ಹಾಕಿತ್ತು. ಮಸೂದ್ ಅಜರ್ ನನ್ನು ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರ್ಪಡೆ ಮಾಡುವ ಅಮೆರಿಕಾದ ಕ್ರಮವನ್ನು ಬೆಂಬಲಿಸಲು ಪ್ರಸ್ತುತ ಪರಿಸ್ಥಿತಿ ಪೂರಕವಾಗಿಲ್ಲ. ಹಾಗಾಗಿ ತಾಂತ್ರಿಕ ತಡೆ ನೀಡಲಾಗಿದೆ ಎಂದು ಚೀನಾ ಈ ಹಿಂದೆ ಸ್ಪಷ್ಟನೆ ನೀಡಿತ್ತು.
ಚೀನಾ ಸ್ಪಷ್ಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಅವರು, ಉಗ್ರ ಮಸೂದ್ ಅಜರ್ ವಿಚಾರ ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ವಿಚಾರಕ್ಕೆ ಸಂಬಂಧಿಸಿದ್ದಲ್ಲ. ಮಸೂದ್ ವಿಚಾರ ಜಾಗತಿಕ ಭಯೋತ್ಪಾದನೆಗೆ ಸಂಬಂಧಿಸಿದ್ದು ಎಂದು ಹೇಳಿದ್ದಾರೆ.
ಮಸೂದ್ ಮೇಲೆ ನಿರ್ಬಂಧ ವಿಧಿಸುವ ಪ್ರಸ್ತಾವನೆಯನ್ನು ಭಾರತ ಮಾಡಿಲ್ಲ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮೂರು ಖಾಯಂ ಸದಸ್ಯ ರಾಷ್ಟ್ರಗಳಾದ ಅಮೆರಿಕ, ಬ್ರಿಟನ್ ಮತ್ತು ಫ್ರಾನ್ಸ್ ದೇಶಗಳು ಮಾಡಿವೆ. ಮಸೂದ್ ವಿಚಾರದಲ್ಲಿ ಚೀನಾ ನಿಲುವು ಬದಲಿಸಿದ್ದೇ ಆದರೆ, ಒಮ್ಮತ ಮೂಡಲಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ