

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಉಗ್ರರು ದಾಳಿ ನಡೆಸಿದ್ದು, ದಾಳಿ ವೇಳೆ ಮೂವರು ಯೋಧರು ಹುತಾತ್ಮರಾಗಿದ್ದಾರೆಂದು ಗುರುವಾರ ತಿಳಿದುಬಂದಿದೆ.
ಶೋಪಿಯಾನ್ ಜಿಲ್ಲೆಯ ಮಾಟ್ರಿಗಂ ಎಂಬಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆ ಮಾಡಿ ವಾಹನದಲ್ಲಿ ಬರುತ್ತಿದ್ದ ಸೇನಾ ಪಡೆಯ ಮೇಲೆ ಉಗ್ರರು ದಾಳಿ ನಡೆಸಿದ್ದಾರೆಂದು ಮೂಲಗಳು ತಿಳಿಸಿವೆ.
ಉಗ್ರರು ದಾಳಿ ನಡೆಸುತ್ತಿದ್ದಂತೆಯೇ ಭಾರತೀಯ ಸೇನೆ ಪ್ರತಿದಾಳಿ ನಡೆಸಿದೆ. ಈ ವೇಳೆ ವೇಳೆ ನಡೆದ ಗುಂಡಿನ ಕಾಳಗದಲ್ಲಿ ಓರ್ವ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಅಲ್ಲದೆ, 6 ಜನರಿಗೆ ಗಾಯವಾಗಿರುವುದಾಗಿ ತಿಳಿದುಬಂದಿದೆ. ಉಗ್ರರ ದಾಳಿಗೆ ಸೇನಾಪಡೆ ದಿಟ್ಟಉತ್ತರ ನೀಡುತ್ತಿದ್ದಂತೆಯೇ ಉಗ್ರರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಕಳೆದ ಮೂರು ವಾರಗಳಲ್ಲಿ ಕಾಶ್ಮೀರದಲ್ಲಿ ನಾಲ್ಕುನೇ ಬಾರಿ ಉಗ್ರರ ದಾಳಿ ನಡೆದಿದೆ ಎನ್ನಲಾಗಿದೆ. ಪ್ರಸ್ತುತ ಸ್ಥಳದ ಸುತ್ತಲೂ ಸೇನಾ ಪಡೆ ಸುತ್ತುವರೆದಿದ್ದು, ಉಗ್ರರಿಗಾಗಿ ಸೇನಾ ಪಡೆ ಕಾರ್ಯಾಚರಣೆಯನ್ನು ಮುಂದುವರೆಸುತ್ತಿದೆ ಎಂದು ತಿಳಿದುಬಂದಿದೆ.