ಮುಂಬೈ: ಬೆಂಗಳೂರಿನಲ್ಲಿ ನಡೆದ ಸಾಮೂಹಿಕ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ದೇಶದಾದ್ಯಂತ ವ್ಯಾಪಕ ವಿರೋಧಗಳು ವ್ಯಕ್ತವಾಗುತ್ತಿವೆ. ಇದರ ಬೆನ್ನಲ್ಲೇ ಮುಂಬೈನಲ್ಲೂ ಇಂತಹದ್ದೇ ಘಟನೆಯೊಂದು ಗುರುವಾರ ರಾತ್ರಿ ನಡೆದಿದೆ.
ಗೆಳಯನಿಗಾಗಿ ಕಾಯುತ್ತಿದ್ದ ಮಹಿಳೆಯೊಬ್ಬರ ಮೇಲೆ ಯುವಕರ ಗುಂಪೊಂದು ಲೈಂಗಿಕ ದೌರ್ಜನ್ಯವೆಸಗಿ ನಂತರ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ಮುಂಬೈನ ಮಹಾಲಕ್ಷ್ಮಿ ರೇಸ್ ಕೋರ್ಸ್'ಬಳಿ ನಡೆದಿದೆ.
ನಿನ್ನೆ ರಾತ್ರಿ 7.30 ರ ಸುಮಾರಿಗೆ ಮಹಿಳೆಯೊಬ್ಬರು ತನ್ನ ಗೆಳೆಯನಿಗಾಗಿ ಮಹಾಲಕ್ಷ್ಮಿ ರೇಸ್ ಕೋರ್ಸ್ ರಸ್ತೆಯ ಬದಿಯಲ್ಲಿ ಕಾಯುತ್ತಿದ್ದ ನಿಂತಿದ್ದರು. ಈ ವೇಳೆ ಹಿಂಬದಿಯಿಂದ ಬಂದಿರುವ ಯುವಕರು ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಅಲ್ಲದೆ, ಮಾರಾಕಾಸ್ತ್ರಗಳಿಂದ ಆಕೆಯ ಮೇಲೆ ಹಲ್ಲೆ ನಡೆಸಿ, ಸ್ಥಳದಿಂದ ಪರಾರಿಯಾಗಿದ್ದಾರೆ.
ತೀವ್ರವಾಗಿ ಗಾಯಗೊಂಡಿದ್ದ ಮಹಿಳೆ ನಡೆಯಲು ಸಾಧ್ಯವಾಗದೆ ರಸ್ತೆಯಲ್ಲಿಯೇ ಕುಸಿದು ಬಿದ್ದಿದ್ದಾರೆ. ಈ ವೇಳೆ ಆಕೆಯ ಗೆಳೆಯ ಸ್ಥಳಕ್ಕೆ ಬಂದಾಗ ಮಹಿಳೆ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿದ್ದಾನೆ. ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾನೆ. ನಂತರ ಆಸ್ಪತ್ರೆಯ ಸಿಬ್ಬಂದಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ದುಷ್ಕರ್ಮಿಗಳು ಹಿಂಬದಿಯಿಂದ ದಾಳಿ ಮಾಡಿದ್ದರಿಂದಾಗಿ ಯುವತಿಗೆ ಆರೋಪಿಗಳನ್ನು ಗುರುತುಹಿಡಿಯಲು ಸಾಧ್ಯವಾಗಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ತೀವ್ರಶೋಧ ಆರಂಭಿಸಿದ್ದಾರೆ.
Advertisement