ಶ್ರೀನಗರ: ಜಮ್ಮು-ಕಾಶ್ಮೀರ ಮಾಜಿ ಸಿಎಂ ಮುಫ್ತಿ ಮೊಹಮ್ಮದ್ ಸಯೀದ್ ಅವರ ಪುಣ್ಯ ಸ್ಮರಣೆಯ ದಿನದಂದೇ ಅವರ ಪುತ್ರ ತಸಾದುಕ್ ಸಯೀದ್ ಪಿಡಿಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ತಂದೆಯ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲೇ ಪಿಡಿಪಿಗೆ ಸೇರ್ಪಡೆಯಾಗಿದ್ದು, ಪಿಡಿಪಿ ಪಕ್ಷದೆಡೆಗಿನ ಕಾರ್ಯಕರ್ತರ ಅಭಿಮಾನಕ್ಕೆ ಧನ್ಯವಾದ ತಿಳಿಸಿದ್ದಾರೆ. ಈ ವರೆಗೂ ರಾಜಕೀಯದಿಂದ ದೂರವಿದ್ದೆ, ಈಗ ಪಿಡಿಪಿಗೆ ಸೇರ್ಪಡೆಯಾಗಿದ್ದು, ಅವಿಸ್ಮರಣೀಯ ದಿನವಾಗಿದೆ ಎಂದಿದ್ದಾರೆ.
ಕಾಶ್ಮೀರದ ರಾಜಕೀಯವನ್ನು ಸರಿಪಡಿಸುವುದು ನನ್ನ ಗುರಿಯಾಗಿದೆ ಎಂದು ತಸಾದುಕ್ ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ತಸಾದುಕ್ ಸಯೀದ್ ಮುಫ್ತಿ ಮೊಹಮ್ಮದ್ ಇದ್ದಂತೆ, ತಸಾದುಕ್ ಗೆ ಕಾಶ್ಮೀರಕ್ಕಾಗಿ ಒಳಿತನ್ನು ಮಾಡುವ ತುಡಿತವಿದೆ ಎಂದು ಹೇಳಿದ್ದಾರೆ. ಅಮೆರಿಕನ್ ಫಿಲ್ಮ್ ಗ್ರಾಜುಯೇಟ್ ಆಗಿರುವ ತಸಾದುಕ್ ಬಾಲಿವುಡ್ ನಲ್ಲಿ ತಸಾದುಕ್ ಹುಸೇನ್ ಎಂಬ ಹೆಸರಿನಲ್ಲಿ ಗುರುತಿಸಿಕೊಂಡಿದ್ದಾರೆ.