

ನವದೆಹಲಿ: ಎನ್ ಡಿ ಎ ಸರ್ಕಾರದ ನೋಟು ನಿಷೇಧ ಕ್ರಮದಿಂದ ದೇಶದ ಜಿಡಿಪಿ ಮೇಲೆ ಹೊಡೆತವಾಗಿಲ್ಲ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಅವರನ್ನು ಹೊರತು ಪಡಿಸಿ ವಿಶ್ವದ ಯಾರೊಬ್ಬರೂ ಹೇಳಿಲ್ಲ ಎಂದ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಹೇಳಿದ್ದಾರೆ.
ಬುಧವಾರ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಜನ್ ವೇದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಚಿದಂಬರಂ ಅವರು, ಎನ್ ಡಿಎ ಸರ್ಕಾರದ ನೋಟು ನಿಷೇಧ ಪ್ರಕ್ರಿಯೆಯೇ ಅಸಂಬಂದ್ಧವಾಗಿದೆ. ನಮ್ಮನ್ನು ಜೈಲಿನಲ್ಲಿ ಪ್ರಧಾನಿ ಮೋದಿ ನೋಟು ನಿಷೇಧ ಹೇರಿದ್ದಾರೆ ಎಂಬ ಭಾವ ನಮ್ಮನ್ನು ಕಾಡುತ್ತಿದ್ದು, ಕನಿಷ್ಠ ಪಕ್ಷ ಇಂತಹ ಮಹತ್ವ ನಿರ್ಧಾರ ಕೈಗೊಳ್ಳುವ ಮುನ್ನ ಕೇಂದ್ರ ಸರ್ಕಾರ ಸಚಿವ ಸಂಪುಟ ಸಭೆ ಕರೆದ ಕುರಿತೂ ಮಾಹಿತಿಗಳು ಲಭ್ಯವಾಗಿಲ್ಲ. ನಮಗೆ ಲಭ್ಯವಾದ ಮಾಹಿತಿಗಳ ಪ್ರಕಾರ ನೋಟು ನಿಷೇಧ ಪ್ರಕ್ರಿಯೆ ಸಂಬಂಧ ಪ್ರಧಾನಿ ಮೋದಿ ಸಂಪುಟ ಸಹೋದ್ಯೋಗಿಗಳೊಂದಿಗೆ ಚರ್ಚಿಸಿರುವ ಕುರಿತು ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ ಎಂದು ಹೇಳಿದರು.
ಇದೇ ವೇಳೆ ನೋಟು ನಿಷೇಧ ಪ್ರಕ್ರಿಯೆ ಸಂಬಂಧ ಆರ್ ಬಿಐ ಯಾವಾಗ ನಿರ್ದೇಶನ ನೀಡಿತು. ನೋಟು ನಿಷೇಧಕ್ಕೆ ಆರ್ ಬಿಐಗೆ ಕೇಂದ್ರ ಸರ್ಕಾರ ಎಷ್ಟು ಕಾಲಾವಕಾಶ ನೀಡಿತ್ತು ಎಂಬುದರ ಬಗ್ಗೆ ನಮಗೆ ಮೋದಿ ಸರ್ಕಾರ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು. ಇದೇ ವೇಳೆ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ ಚಿದಂಬರಂ, " ಓರ್ವ ವ್ಯಕ್ತಿ ತನ್ನನ್ನು ತಾನು ಫಕೀರ ಎಂದು ಹೇಳಿಕೊಳ್ಳುತ್ತಾರೆ. ಆದರೆ ಎಲ್ಲರೂ ತಮ್ಮ ಆದೇಶವನ್ನು ಪಾಲಿಸಲೇಬೇಕು ಎಂದು ಸೂಚಿಸುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ದೇಶದಲ್ಲಿ ಯಾವ ಕ್ಷೇತ್ರವೂ ಅಭಿವೃದ್ದಿ ಹೊಂದಿಲ್ಲ. ಕೇವಲ ಮೋದಿ ಮಾತ್ರ ಅಭಿವೃದ್ಧಿಯಾಗಿದೆ ಎಂಬ ಅಂಶವನ್ನು ಜನರ ತಲೆಗೆ ತುಂಬುತಿದ್ದಾರೆ. ನೋಟು ನಿಷೇಧದಿಂದಾಗಿ ಕಪ್ಪುಹಣ ಮತ್ತು ಭ್ರಷ್ಟಾಚಾರ ಮತ್ತು ನಕಲಿ ನೋಟು ಚಲಾವಣೆ ಎಷ್ಟರ ಮಟ್ಟಿಗೆ ನಿಯಂತ್ರಣವಾಗಿದೆ ಎಂಬುದನ್ನು ಮೋದಿ ಸ್ಪಷ್ಟಪಡಿಸಬೇಕು ಎಂದು ಚಿದಂಬರಂ ಆಗ್ರಹಿಸಿದರು.
ಜನತೆಯ ಮೇಲೆ ನಗದು ರಹಿತ ವಹಿವಾಟು ಹೇರಲು ಕೇಂದ್ರ ಸರ್ಕಾರ ಮುಂದಾಗಿರುವುದು ಸರಿಯಲ್ಲ. ದೇಶದ ಪ್ರತಿಯೊಬ್ಬ ನಾಗರಿಕನಿಗೂ ಆರ್ಥಿಕ ಸ್ವಾತಂತ್ಯ್ರವಿದೆ. ಹೀಗಾಗಿ ಆತ ನಗದು/ ನಗದು ರಹಿತ ವಹಿವಾಟು ನಡೆಸುವುದು ಆತನ ಆಯ್ಕೆಯಾಗಿರುತ್ತದೆ. ನಾನು ನೋಡಿದಂತೆ ದೇಶದ ಇತಿಹಾಸದಲ್ಲಿಯೇ ಬಿಜೆಪಿ ಅತ್ಯುತ್ತಮ ಈವೆಂಟ್ ಮ್ಯಾನೇಜರ್ ಎಂದು ಚಿದಂಬರಂ ವ್ಯಂಗ್ಯವಾಡಿದರು.