ಲಖನೌ: ಉತ್ತರ ಪ್ರದೇಶದಲ್ಲಿ ಬಿಜೆಪಿ ವಿರುದ್ಧ ಮಹಾ ಘಟಬಂಧನ್ ರಚನೆಯಾಗುವ ಸಾಧ್ಯತೆ ಕ್ಷಿಣಿಸಿದ್ದು, ಸಮಾಜವಾದಿ ಪಕ್ಷ ರಾಷ್ಟ್ರೀಯ ಲೋಕದಳ(ಆರ್ ಎಲ್ ಡಿ) ಜೊತೆ ಮೈತ್ರಿಯನ್ನು ಗುರುವಾರ ಸ್ಪಷ್ಟವಾಗಿ ತಳ್ಳಿಹಾಕಿದೆ. ಆದರೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಭರವಸೆ ನೀಡಿದೆ.
'ನಾವು ಕೇವಲ ಕಾಂಗ್ರೆಸ್ ಜೊತೆ ಮಾತ್ರ ಮೈತ್ರಿ ಮಾಡಿಕೊಳ್ಳುತ್ತೇವೆ. ಆರ್ ಎಲ್ ಡಿ ಜೊತೆ ಯಾವುದೇ ಮೈತ್ರಿ ಇಲ್ಲ. ಮೈತ್ರಿ ಸಂಬಂಧ ಆರ್ ಎಲ್ ಡಿ ಜೊತೆ ಯಾವುದೇ ಮಾತುಕತೆ ನಡೆಯುತ್ತಿಲ್ಲ. 403 ಸ್ಥಾನಗಳ ಪೈಕಿ ಸುಮಾರು 30 ಸ್ಥಾನಗಳಲ್ಲಿ ಎಸ್ಪಿ ಸ್ಪರ್ಧಿಸಿದರೆ ಉಳಿತ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕಣಕ್ಕಿಳಿಯಲಿದೆ' ಎಂದು ಸಮಾಜವಾದಿ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಕಿರೋನ್ಮಯಿ ನಂದಾ ಅವರು ತಿಳಿಸಿದ್ದಾರೆ.
ಮೊದಲ ಮತ್ತು ಎರಡನೇ ಹಂತದ ಚುನಾವಣೆಗೆ ಸಮಾಜವಾದಿ ಪಕ್ಷದ ಅಭ್ಯರ್ಥಿಗಳನ್ನು ಈಗಾಗಲೇ ಅಂತಿಮಗೊಳಿಸಲಾಗಿದ್ದು, ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ನಿರ್ಧರಿಸಬೇಕಿದೆ ಎಂದು ಅವರು ಹೇಳಿದ್ದಾರೆ.
ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ನಮ್ಮ ರಾಷ್ಟ್ರೀಯ ಅಧ್ಯಕ್ಷರಾದ ಅಖಿಲೇಶ್ ಯಾದವ್ ಅವರು ಪ್ರಕಟಿಸಲಿದ್ದಾರೆ ಎಂದು ನಂದಾ ತಿಳಿಸಿದ್ದಾರೆ.