ನವದೆಹಲಿ: 1984ರ ಸಿಖ್ ವಿರೋಧಿ ದಂಗೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್ಐಟಿ) ಬುಧವಾರ ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್ ಅವರ ಜಾಮೀನು ರದ್ದು ಕೋರಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದೆ.
ಮೂವರು ಸಿಖ್ಖರನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಜ್ಜನ್ ಕುಮಾರ್ ಅವರಿಗೆ ವಿಚಾರಣಾ ಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ. ಇದೀಗ ವಿಚಾರಣಾ ಕೋರ್ಟ್ ಆದೇಶ ಕಾನೂನು ಬಾಹಿರ ಎಂದು ಎಸ್ ಐಟಿ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದೆ.
ಅರ್ಜಿ ವಿಚಾರಣೆಗೆ ಸ್ವೀಕರಿಸಿರುವ ನ್ಯಾಯಮೂರ್ತಿ ಎಸ್.ಪಿ.ಗರ್ಗ್ ಅವರು, ವಿಚಾರಣಾ ಕೋರ್ಟ್ ಆದೇಶ ಹೇಗೆ ಕಾನೂನು ಬಾಹಿರ ಮತ್ತು ಆರೋಪಿ ಇತರೆ ಪ್ರಕರಣಗಳನ್ನು ಎದುರಿಸುತ್ತಿರುವಾಗ ಎಲ್ಲಾ ಕಡೆ ವಿಚಾರಣೆಗೆ ಹಾಜರಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಕಳೆದ ಡಿಸೆಂಬರ್ 21ರಂದು ಸಜ್ಜನ್ ಕುಮಾರ್ ಅವರಿಗೆ ದ್ವಾರಕಾ ಕೋರ್ಟ್ ವೈಯಕ್ತಿಕ ಬಾಂಡ್, 1 ಲಕ್ಷ ರುಪಾಯಿ ಶ್ಯೂರಿಟಿ ಮೇಲೆ ಜಾಮೀನು ನೀಡಿತ್ತು. ಅಲ್ಲದೆ ವಿಚಾರಣೆಗೆ ಹಾಜರಾಗಬೇಕು ಎಂದು ಸೂಚಿಸಿತ್ತು.