

ನವದೆಹಲಿ: ಅಮೆರಿಕಾದ ನೂತನ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಡೊನಾಲ್ಡ್ ಟ್ರಂಪ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಕರೆ ಮಾಡಿ ಮಾತುಕತೆ ನಡೆಸಿದ್ದು, ಈ ವೇಳೆ ಭಾರತಕ್ಕೆ ಭೇಟಿ ನೀಡುವಂತೆ ಮೋದಿಯವರು ಆಹ್ವಾನ ನೀಡಿದ್ದಾರೆಂದು ಬುಧವಾರ ತಿಳಿದುಬಂದಿದೆ.
ಟ್ರಂಪ್ ಜೊತೆಗಿನ ಮಾತುಕತೆ ಕುರಿತಂತೆ ಪ್ರಧಾನಿ ಮೋದಿಯವರು ಟ್ವೀಟ್ ಮಾಡಿದ್ದು, ಕಳೆದ ಸಂಜೆ ಅಮೆರಿಕ ನೂತನ ಅಧ್ಯಕ್ಷ ಟ್ರಂಪ್ ಜೊತೆಗೆ ಆತ್ಮೀಯ ಮಾತುಕತೆ ನಡೆಯಿತು. ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಒಪ್ಪಂಗಳನ್ನು ಗಟ್ಟಿಗೊಳಿಸಲು ಒಟ್ಟಾಗಿ ಕೆಲಸ ಮಾಡಲು ಇಬ್ಬರೂ ಒಪ್ಪಿದ್ದೇವೆಂದು ಹೇಳಿಕೊಂಡಿದ್ದಾರೆ.
ಮತ್ತೊಂದು ಟ್ವೀಟ್ ನಲ್ಲಿ ಭಾರತಕ್ಕೆ ಭೇಟಿ ನೀಡುವಂತೆ ಇದೇ ವೇಳೆ ಡೊನಾಲ್ಡ್ ಟ್ರಂಪ್ ಅವರಿಗೆ ಆಹ್ವಾನಿಸಲಾಯಿತು ಎಂದು ಮೋದಿಯವರು ತಿಳಿಸಿದ್ದಾರೆ.
ಅಮೆರಿಕದ 45ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ 4 ದಿನಗಳ ಬಳಿಕ ಅಂದರೆ ನಿನ್ನೆ ರಾತ್ರಿ ಸುಮಾರು 11.30ರ ಸುಮಾರಿನಲ್ಲಿ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿದ್ದರು.
ಈ ವೇಳೆ ಭಾರತ ದೇಶ ಅಮೆರಿಕದ ನಿಜವಾದ ಸ್ನೇಹಿತ ರಾಷ್ಟ್ರ ಎಂದು ಬಣ್ಣಿಸಿದ್ದಾರೆ. ಅಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಮೆರಿಕಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡಿದ್ದು, ತಮ್ಮನ್ನು ಬರ ಮಾಡಿಕೊಳ್ಳಲು ತಾವು ಉತ್ಸುಕರಾಗಿರುವುದಾಗಿ ಟ್ರಂಪ್ ಹೇಳಿದ್ದಾರೆ. ದೂರವಾಣಿ ಕರೆ ವೇಳೆ ಉಭಯ ನಾಯಕರು ವ್ಯಾಪಾರ, ರಕ್ಷಣೆ ಮತ್ತು ಭಯೋತ್ಪಾದನೆ ಕುರಿತಂತೆ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.