ನವದೆಹಲಿ: ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಉದ್ಯೋಗ ಸೃಷ್ಟಿಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಭಾಷಣದ ನಂತರ ಸಂಸತ್ ಭವನದ ಹೊರಗೆ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಅವರು, ಸರ್ಕಾರದ ಬಹುದೊಡ್ಡ ಸಮಸ್ಯೆಯೆಂದರೆ ಉದ್ಯೋಗ ಸೃಷ್ಟಿಗೆ ಏನೂ ಕೆಲಸ ಮಾಡುತ್ತಿಲ್ಲ. ಸರ್ಕಾರ ಆ ವಿಷಯದಲ್ಲಿ ಸಂಪೂರ್ಣ ವಿಫಲವಾಗಿದೆ ಎಂದರು.
ಕಾಂಗ್ರೆಸ್ ನ ಮತ್ತೊಬ್ಬ ನಾಯಕ ಅಹ್ಮದ್ ಪಟೇಲ್, ರಾಷ್ಟ್ರಪತಿಗಳ ಭಾಷಣ ನಿರಾಶೆಯಿಂದಿದ್ದು ವಾಸ್ತವ ಸವಾಲುಗಳನ್ನು ಪ್ರಸ್ತಾಪಿಸಿಲ್ಲ. ಅದು ಕೇವಲ ಸರ್ಕಾರದ ವಿಫಲ ಭರವಸೆಗಳ ಸಂಗ್ರಹವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ ನೋಟುಗಳ ಅಮಾನ್ಯತೆಯ ನಂತರದ ದಾಖಲೆಗಳ ಬಗ್ಗೆ, ಹೊಸ ಉದ್ಯೋಗ ಸೃಷ್ಟಿ, ರೈಲ್ವೆ ಸುರಕ್ಷತೆ ಬಗ್ಗೆ ಪ್ರಸ್ತಾಪ ಮಾಡಿದ್ದಾರೆಯೇ ಎಂದು ಅವರು ಪ್ರಶ್ನಿಸಿದ್ದಾರೆ.