ಡೋಕ್ಲಾಮ್ ಗಾಗಿ ಇಂಡೋ-ಚೀನಾ ಜಟಾಪಟಿ; ಗಡಿ ಪ್ರಕ್ಷುಬ್ಧ!

ಭಾರತದಲ್ಲಿರುವ ಗಡಿ ಪ್ರದೇಶ ಡೋಕ್ಲಾಮ್ ಅನ್ನು ತನ್ನದೆಂದು ವಾದಿಸುವ ಮೂಲಕ ಚೀನಾ ಮತ್ತೆ ತನ್ನ ಕಾಲುಕೆರೆದಿದ್ದು, ಚೀನಾಕ್ಕೆ ಅದರದೇ ರೀತಿಯಲ್ಲಿ ಉತ್ತರಿಸಲು ಮುಂದಾಗಿರುವ ಭಾರತ ವಿವಾದಿತ ಡೋಕ್ಲಾಮ್ ಗೆ ತನ್ನ ಹೆಚ್ಚುವರಿ ಪಡೆಗಳನ್ನು ರವಾನಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ಭಾರತದಲ್ಲಿರುವ ಗಡಿ ಪ್ರದೇಶ ಡೋಕ್ಲಾಮ್ ಅನ್ನು ತನ್ನದೆಂದು ವಾದಿಸುವ ಮೂಲಕ ಚೀನಾ ಮತ್ತೆ ತನ್ನ ಕಾಲುಕೆರೆದಿದ್ದು, ಚೀನಾಕ್ಕೆ ಅದರದೇ ರೀತಿಯಲ್ಲಿ ಉತ್ತರಿಸಲು ಮುಂದಾಗಿರುವ ಭಾರತ ವಿವಾದಿತ ಡೋಕ್ಲಾಮ್  ಗೆ ತನ್ನ ಹೆಚ್ಚುವರಿ ಪಡೆಗಳನ್ನು ರವಾನಿಸಿದೆ.

ಕಳೆದು ಒಂದು ತಿಂಗಳಿನಿಂದ ನಡೆಯುತ್ತಿದ್ದ ಸಂಘರ್ಷ ಇದೀಗ ತಾರಕಕ್ಕೇರಿದ್ದು, ವಿವಾದಿತ ಪ್ರದೇಶದಲ್ಲಿ ಚೀನಾ ದೇಶ ತನ್ನ ಹೆಚ್ಚುವರಿ ಪಡೆಗಳನ್ನು ರವಾನಿಸುವುದರೊಂದಿಗೆ ಇಂಡೋ-ಚೀನಾ ಗಡಿಯಲ್ಲಿ ಇದೀಗ ಪ್ರಕ್ಷುಬದ್ಧ  ವಾತಾವರಣ ನಿರ್ಮಾಣವಾಗಿದೆ. ಇನ್ನು ಚೀನಾಕ್ಕೆ ಅದರದೇ ಧಾಟಿಯಲ್ಲಿ ತಿರುಗೇಟು ನೀಡಿರುವ ಭಾರತ ಕೂಡ ಡೋಕ್ಲಾಮ್ ಪ್ರದೇಶಕ್ಕೆ ಹೆಚ್ಚುವರಿ ಸೇನಾಪಡೆಗಳನ್ನು ರವಾನಿಸಿದೆ.

ಇತ್ತ ತನ್ನ ಭೂ ಪ್ರದೇಶವಾಗಿರುವ ಡೋಕ್ಲಾಮ್ ಗೆ ಭಾರತೀಯ ಸೈನಿಕರೇ ಅತಿಕ್ರಮಣ ಮಾಡಿದ್ದಾರೆ ಎಂದು ಚೀನಾ ಆರೋಪಿಸಿದ್ದು, ಇದಕ್ಕೆ ಉತ್ತರಿಸುವ ಭಾರತ ಕೂಡ ಡೋಕ್ಲಾಮ್ ಪ್ರದೇಶ ತನ್ನ ಗಡಿ ಪ್ರದೇಶವಾಗಿದೆ. ತನ್ನ  ಗಡಿಯಲ್ಲಿ ಯಾರೇ ಅತಿಕ್ರಮಣ ಮಾಡಿದರೂ ನಾವು ಸುಮ್ಮನಿರುವುದಿಲ್ಲ. ಇದೇ ಕಾರಣಕ್ಕೆ ವಿವಾದಿತ ಪ್ರದೇಶಕ್ಕೆ ಹೆಚ್ಚುವರಿ ಪಡೆಗಳನ್ನು ರವಾನಿಸಿದ್ದೇವೆಯೇ ಹೊರತು ಯುದ್ಧ ಮಾಡುವ ಉದ್ದೇಶದಿಂದಲ್ಲ ಎಂದು ಕೇಂದ್ರ ರಕ್ಷಣಾ  ಸಚಿವಾಲಯ ಸ್ಪಷ್ಟಪಡಿಸಿದೆ.

ಕಳೆದ ಒಂದು ತಿಂಗಳಿನಿಂದ ಭಾರತ–ಚೀನಾ ಗಡಿಯ ಸಿಕ್ಕಿಂ ವಲಯದಲ್ಲಿ ಸಂಘರ್ಷ ನಡೆಯುತ್ತಿದ್ದು, ಗಡಿ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿದ ಚೀನೀ ಸೈನಿಕರು ಅಲ್ಲಿ ಇದ್ದ ಭಾರತೀಯ ಬಂಕರ್ ಗಳನ್ನು ನಾಶ ಮಾಡಿದ್ದರು.  ಇದೇ ಕಾರಣಕ್ಕೆ ಗಡಿ ಗಸ್ತು ನಡೆಸುವ ಯೋಧರಿಗೆ ಬೆಂಬಲವಾಗಿ ಇನ್ನಷ್ಟು ಸೈನಿಕರನ್ನು ಕಳುಹಿಸಲಾಗಿದ್ದು, ಯುದ್ಧ ಮಾಡುವ ಉದ್ದೇಶಕ್ಕೆ ಅಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ. ಜೂನ್‌ 6 ಘಟನೆ ಬಳಿಕ ಇಂಡೋ-ಚೀನಾ ಗಡಿ  ಪ್ರಕ್ಷುಬ್ದಗೊಂಡಿದ್ದು, ಭಾರತೀಯ ಬಂಕರ್ ಗಳನ್ನು ನಾಶ ಮಾಡುವ ಮೂಲಕ ಚೀನಾ ಮತ್ತೆ ತನ್ನ ಆಕ್ರಮಣಕಾರಿ ಮನೋಭಾವ ಪ್ರದರ್ಶಿಸಿದೆ.

ಚೀನಾವಾದಕ್ಕೆ ಭಾರತದ ಪ್ರತ್ಯುತ್ತರ
ಏತನ್ಮಧ್ಯೆ ಉಭಯ ದೇಶಗಳ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಚೀನಾ ಸರ್ಕಾರಿ ಸ್ವಾಮ್ಯದ ಸುದ್ದಿಸಂಸ್ಥೆ ಕ್ಸಿನ್ಹುವಾ ಪ್ರತಿಕ್ರಿಯೆ ನೀಡಿದ್ದು, ವಿವಾದಿತ ಪ್ರದೇಶದಿಂದ ಭಾರತ ತನ್ನ ಪಡೆಗಳನ್ನು ವಾಪಸ್ ಕರೆಸಿಕೊಂಡರೆ ಮಾತ್ರ ಸಮಸ್ಯೆ  ಬಗೆ ಹರಿಯುತ್ತದೆ. ವಿವಾದಿತ ಗಡಿ ಪ್ರದೇಶ ಚೀನಾಗೆ ಸೇರಿದ್ದಾಗಿದ್ದು, ಸಿಕ್ಕಿಂನಲ್ಲಿ ಭಾರತ–ಚೀನಾ ಗಡಿಯನ್ನು 1890ರ ಸಿನೊ–ಬ್ರಿಟಿಷ್‌ ಒಪ್ಪಂದದ ಪ್ರಕಾರ ಗುರುತಿಸಲಾಗಿದೆ ಎಂದು ಹೇಳಿದೆ. ಇದಕ್ಕೆ ಪ್ರತ್ಯುತ್ತರ ನೀಡಿರುವ  ಭಾರತ, ಸಿಕ್ಕಿಂ ವಲಯದ ಗಡಿಯನ್ನು 2012ರಲ್ಲಿ ನಿಗದಿಪಡಿಸಲಾಗಿದ್ದು, ಡೋಕ್ಲಾಮ್ ಭಾರತಕ್ಕೆ ಸೇರಿದ ಗಡಿ ಪ್ರದೇಶವಾಗಿದೆ ಎಂದು ಹೇಳಿದೆ.

ಇಷ್ಟಕ್ಕೂ ವಿವಾದವೇಕೆ?
ಭಾರತದ ಗಡಿ ರಕ್ಷಣಾ ದೃಷ್ಟಿಯಿಂದ ಭೂತಾನ್ ನೊಂದಿಗೆ ಒಪ್ಪಂದ ಮಾಡಿಕೊಂಡಿರುವ ಭಾರತ ಸಿಲಿಗುರಿ ಕಾರಿಡಾರ್ ನಿರ್ಮಿಸುತ್ತಿದೆ. ಒಂದು ವೇಳೆ ಈ ಕಾರಿಡಾರ್ ಪೂರ್ಣಗೊಂಡಿದ್ದೇ ಆದರೆ ಗಡಿಯಲ್ಲಿ ಚೀನಿ ಸೈನಿಕರು ಏನೇ  ಯೋಜನೆ ರೂಪಿಸಿದರೂ ಭಾರತಕ್ಕೆ ಆದರ ಮಾಹಿತಿ ಲಭ್ಯವಾಗುತ್ತದೆ. ಇನ್ನು ಇದೇ ಕಾರಿಡಾರ್ ಗೆ ಹೊಂದಿಕೊಂಡಂತೆ ಭಾರತೀಯ ಪಡೆಗಳ ಶಿಬಿರವಿದ್ದು, ಇದೇ ಕಾರಣಕ್ಕೆ ಚೀನಾ ಕೂಡ ಡೋಕ್ಲಾಮ್ ಸಮೀಪದಲ್ಲೇ ದಿಢೀರ್ ರಸ್ತೆ  ನಿರ್ಮಾಣಕ್ಕೆ ಮುಂದಾಗಿತ್ತು. ಇದನ್ನು ಯಾವಾಗ ಭಾರತೀಯ ಸೈನಿಕರು ವಿರೋಧಿಸಿದರೋ ಆಗ ಚೀನೀ ಸೈನಿಕರು ಕಾಲುಕೆರೆದು ಸಂಘರ್ಷಕ್ಕೆ ಮುಂದಾಗಿದ್ದಾರೆ ಎಂದು ಹೇಳಾಗುತ್ತಿದೆ.

1962ರ ಬಳಿಕ ಅತೀ ದೊಡ್ಡ ಬಿಕ್ಕಟ್ಟು!
1962ರ ಯುದ್ಧದ ನಂತರ ಭಾರತ ಮತ್ತು ಚೀನಾ ನಡುವಣ ಅತ್ಯಂತ ದೊಡ್ಡ ಬಿಕ್ಕಟ್ಟು ಇದು ಎಂದು ವಿಶ್ಲೇಷಣೆ ಮಾಡಲಾಗುತ್ತಿದ್ದು, 2013ರಲ್ಲಿ ಜಮ್ಮು ಮತ್ತು ಕಾಶ್ಮೀರದ ಲಡಾಕ್‌ ನ ದೌಲತ್‌ ಬೇಗ್‌ ಓಲ್ಡೀಯಲ್ಲಿ ಚೀನಾದ ಸೇನೆ  ಭಾರತದೊಳಕ್ಕೆ 30 ಕಿ.ಮೀನಷ್ಟು ಅತಿಕ್ರಮಣ ಮಾಡಿತ್ತು. ಇದು ತನ್ನ ಕ್ಸಿನ್‌ ಜಿಯಾಂಗ್‌ ಪ್ರಾಂತ್ಯದ ಭಾಗ ಎಂದು ಚೀನಾ ವಾದಿಸಿತ್ತು. ಆದರೆ ಭಾರತದ ಸೇನೆ ಚೀನಾ ಯೋಧರನ್ನು ಹೊರಗಟ್ಟುವಲ್ಲಿ ಯಶಸ್ವಿಯಾಗಿತ್ತು. ಈ  ಸಂಘರ್ಷ 21 ದಿನ ನಡೆದಿತ್ತು. ಈ ಬಾರಿ ಜೂನ್‌ 1ರಂದು ಆರಂಭವಾದ ಸಂಘರ್ಷ ಇನ್ನೂ ಮುಂದುವರಿದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com