
ಜೆರುಸಲೇಂ: ಮಹತ್ವದ ಬೆಳವಣಿಗೆಯಲ್ಲಿ ಇಸ್ರೇಲ್ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದಲ್ಲಿ ಇಸ್ರೇಲ್ ಕ್ಷಿಪಣಿ ತಯಾರಿಸುವ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಹಾಗೂ ಇಸ್ರೇಲ್ ಪ್ರಧಾನಿ ನೇತನ್ಯಾಹು ಅವರು ಅವರು ಹಲವು ಒಪ್ಪಂದಗಳಿಗೆ ಸಹಿ ಹಾಕಿದ್ದು, ಈ ಪೈಕಿ ಭಾರತದಲ್ಲಿ ಇಸ್ರೇಲ್ ಕ್ಷಿಪಣಿಗಳನ್ನು ತಯಾರಿಸುವ ಮಹತ್ವದ ಒಪ್ಪಂದಕ್ಕೂ ಪ್ರಧಾನಿ ನರೇಂದ್ರ ಮೋದಿ ಹಾಗೂ ನೇತನ್ಯಾಹು ಸಹಿ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಅಂತೆಯೇ ಈ ಕ್ಷಿಪಣಿ ತಯಾರಿಕೆಯನ್ನು ಇಸ್ರೇಲ್-ಭಾರತ ಜಂಟಿಯಾಗಿ ತಯಾರಿಸಲಿದ್ದು, ಆ ಮೂಲಕ ಭಾರತಕ್ಕೂ ಇಸ್ರೇಲ್ ಕ್ಷಿಪಣಿ ತಂತ್ರಜ್ಞಾನದ ಬಳಕೆಗೆ ಅನುವು ಮಾಡಿಕೊಟ್ಟಂತಾಗುತ್ತದೆ.
ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ ಮೇಕ್ ಇನ್ ಇಂಡಿಯಾಗೆ ಈ ಒಪ್ಪಂದ ಮಹತ್ವದಯ ಯಶಸ್ಸು ಎಂದು ಬಿಂಬಿಸಲಾಗುತ್ತಿದ್ದು, ಇಸ್ರೇಲ್ ನ ಏರೋಸ್ಪೇಸ್ ಇಂಡಸ್ಟ್ರೀಸ್, ಭಾರತದ ಸಂಸ್ಛೆಯೊಂದು ಜಂಟಿಯಾಗಿ ಕ್ಷಿಪಣಿ ತಯಾರಿಕಾ ಘಟಕವನ್ನು ಭಾರತದಲ್ಲಿ ತೆರೆಯಲಿದೆ ಎಂದು ತಿಳಿದುಬಂದಿದೆ. ಒಟ್ಟು ಉಭಯ ದೇಶಗಳು 2 ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ್ದು, ಈ ಪೈಕಿ ಒಂದು ಯೋಜನೆ ಸುಮಾರು ಒಂದು ಬಿಲಿಯನ್ ಡಾಲರ್ ಮೊತ್ತದ ಒಪ್ಪಂದವಾಗಿದ್ದು, ಮತ್ತೊಂದು 2 ಬಿಲಿಯನ್ ಡಾಲರ್ ಮೊತ್ತದ ಒಪ್ಪಂದವಾಗಿದೆ ಎಂದು ಹೇಳಲಾಗುತ್ತಿದೆ.
ಇನ್ನು ಈ ಯೋಜನೆ ಇಸ್ರೇಲ್ ನ ರಕ್ಷಣಾ ವಲಯದ ದೈತ್ಯ ಸಂಸ್ಥೆ ರಾಫೆಲ್ ಅಡ್ವಾನ್ಸ್ಡ್ ಡಿಫೆನ್ಸ್ ಸಿಸ್ಟಮ್ ಕೂಡ ಸಹಕಾರ ನೀಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದ್ದು, ಭಾರತ ಮತ್ತು ಇಸ್ರೇಲ್ ದೇಶಗಳು ಜಂಟಿ ಮಿಲಿಟರಿ ಇಂಡಸ್ಟ್ರಿ ಹೊಂದುವ ಕುರಿತು ಯೋಜನೆಯಲ್ಲಿ ತೊಡಗಿವೆ. ಇದರ ಭಾಗವಾಗಿಯೇ ಇಸ್ರೇಲ್ ಭಾರತದಲ್ಲಿ ಇಸ್ರೇಲ್ ತಯಾರಿಕಾ ಘಟಕವನ್ನು ತೆರೆಯುತ್ತಿದೆ ಎಂದು ಹೇಳಲಾಗುತ್ತಿದೆ.
ಪ್ರಸ್ತುತ ಇಸ್ರೇಲ್ ರಕ್ಷಣಾ ವಲಯದ ಬಹುತೇಕ ಶಸ್ತ್ರಾಸ್ತ್ರಗಳು ಅಮೆರಿಕದ ರಕ್ಷಣಾ ಸಂಸ್ಥೆಗಳಲ್ಲಿ ತಯಾರಾಗುತ್ತಿದ್ದು, ಶೀಘ್ರದಲ್ಲೇ ಭಾರತ ಕೂಡ ಇಸ್ರೇಲ್ ಗೆ ರಕ್ಷಣಾ ಪರಿಕರಗಳನ್ನು ತಯಾರಿಸಿ ಕೊಡಲಿದೆ.
ಈ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಮೆರಿಕ ಮೊದಲು ನೀತಿಯಿಂದಾಗಿ ಯುದ್ಧ ವಿಮಾನ ತಯಾರಿಕಾ ಸಂಸ್ಥೆ ಲಾಕ್ ಹೀಡ್ ಮಾರ್ಟಿನ್ ತನ್ನ ಎಫ್ 16 ಯುದ್ಧ ವಿಮಾನ ತಯಾರಿಕಾ ಘಚಕವನ್ನು ಭಾರತಕ್ಕೆ ಸ್ಥಳಾಂತರಿಸಲು ನಿರ್ಧರಿಸಿತ್ತು. ಇದೀಗ ಇಸ್ರೇಲ್ ಕೂಡ ತನ್ನ ರಕ್ಷಣಾ ಸಾಮಾಗ್ರಿಗಳ ತಯಾರಿಕಾ ಘಟಕವನ್ನು ಭಾರತದಲ್ಲಿ ತೆರೆಯಲು ಒಪ್ಪಂದ ಮಾಡಿಕೊಂಡಿದೆ.
Advertisement