

ನವದೆಹಲಿ: ಈ ಹಿಂದಿನ ಗುಜುರಾತ್ ರಾಜಧಾನಿ ಅಹ್ಮದಾಬಾದ್ ನಗರವನ್ನು ಪ್ರತಿಷ್ಟಿತ ವಿಶ್ವ ಪರಂಪರೆ ನಗರಗಳ ಪಟ್ಟಿಗೆ ಸೇರಿಸಲಾಗಿದ್ದು, ಈ ಪಟ್ಟಿಗೆ ಸೇರಿದ ಭಾರತದ ಮೊದಲ ನಗರ ಎಂಬ ಕೀರ್ತಿಗೆ ಅಹ್ಮದಾಬಾದ್ ಭಾಜನವಾಗಿದೆ.
ವಿಶ್ವಸಂಸ್ಥೆಯ ವಿಶ್ವ ಸಾಂಸ್ಕ್ರತಿಕ ಸಂಸ್ಥೆ ಯುನೆಸ್ಕೋ ಶನಿವಾರ ಅಧಿಕೃತವಾಗಿ ಅಹ್ಮದಾಬಾದ್ ಅನ್ನು ವಿಶ್ವ ಪಾರಂಪರಿಕ ನಗರಿ ಎಂದು ಘೋಷಣೆ ಮಾಡಿದೆ. ಪೊಲ್ಯಾಂಡ್ ನ ಕಾರ್ಲೋದಲ್ಲಿ ನಡೆದ ಯುನೆಸ್ಕೋದ ವಿಶ್ವ ಪರಂಪರೆ ಸಮಿತಿ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದ್ದು, ವಿಶ್ವ ಪರಂಪರೆ ನಗರ ಪಟ್ಟಿಗೆ ಸೇರ್ಪಡೆಯಾದ ಭಾರತದ ಮೊದಲ ನಗರ ಎಂಬ ಕೀರ್ತಿಗೆ ಭಾಜನವಾಗಿದೆ. 2010ರಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಅಹ್ಮದಾಬಾದ್ ಅನ್ನು ವಿಶ್ವ ಪಾರಂಪರಿಕ ನಗರಿ ಪಟ್ಟಿಗೆ ಸೇರ್ಪಡೆ ಮಾಡಬೇಕು ಎಂದು ಪ್ರಸ್ತಾವನೆ ಕಳುಹಿಸಿದ್ದರು. ಸುದೀರ್ಘ ಸಭೆ ಮತ್ತು ಚರ್ಚೆಗಳ ಬಳಿಕ ಕೊನೆಗೂ ಅಹ್ಮದಾಬಾದ್ ಅನ್ನು ವಿಶ್ವ ಪರಂಪರೆ ನಗರ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ ಎಂದು ಯುನೆಸ್ಕೋದ ಭಾರತ ಶಾಶ್ವತ ಪ್ರತಿನಿಧಿ ರುಚಿರಾ ಕಂಬೋಜ್ ತಿಳಿಸಿದ್ದಾರೆ.
ವಿಶ್ವ ಪರಂಪರೆ ನಗರಗಳ ಪಟ್ಟಿಯಲ್ಲಿ ಈಗಾಗಲೇ ಪ್ಯಾರಿಸ್, ವಿಯೆನ್ನಾ, ಕೈರೋ, ಬ್ರಸೆಲ್ಸ್, ರೋಮ್ ಮತ್ತು ಎಡಿನ್ಬರ್ಗ್ ನಗರಗಳಿದ್ದು, ಇದೀಗ ಗುಜರಾತ್ ನ ಐತಿಹಾಸಿಕ ಗೋಡೆ ನಗರಿ ಕೂಡ ಸೇರ್ಪಡೆಯಾಗುತ್ತಿರುವುದು ಭಾರತದ ಮಟ್ಟಿಗೆ ಹೆಮ್ಮೆಯ ಸಂಗತಿಯಾಗಿದೆ. ಇನ್ನು ನೇಪಾಳದ ಭಕ್ತಪುರ ಮತ್ತು ಶ್ರೀಲಂಕಾದ ಗಾಲೆ ಕೂಡ ವಿಶ್ವಪರಂಪರೆ ನಗರಗಳ ಪಟ್ಟಿಗೆ ಸೇರ್ಪಡೆಯಾಗಿದೆ.
ಇದೇ ವೇಳೆ ಎರಿಟ್ರಿಯಾ ರಾಜಧಾನಿ ಅಸ್ಮರಾ ನಗರವನ್ನೂ ಕೂಡ ವಿಶ್ವಪರಂಪರ ನಗರಗಳ ಪಟ್ಟಿಗೆ ಸೇರಿಸಲಾಗಿದೆ.