ನವದೆಹಲಿ: ಭಾರತ ಹಾಗೂ ಚೀನಾ ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ಮುಂದುವರೆದಿದ್ದು, ಗಡಿ ಬಿಟ್ಟು ಹೋಗಿ ಇಲ್ಲವೇ ಯುದ್ಧ ಎದುರಿಸಲು ಸಿದ್ಧರಾಗಿ ಎಂಬ ಚೀನಾದ ಬೆದರಿಕೆಗೆ ಭಾರತ ಸೆಡ್ಡು ಹೊಡೆದಿದೆ.
ಚೀನಾದ ಒತ್ತಡ ಹಾಗೂ ಬೆದರಿಕೆಗಳಿಂದ ಹಿಂದಕ್ಕೆ ಸರಿಯಲ್ಲ ಎಂಬ ಸಂದೇಶವನ್ನು ಚೀನಾಗೆ ನೀಡುವ ಸಲುವಾಗಿ ಭಾರತೀಯ ಯೋಧರು ಗಡಿಯಲ್ಲಿ ಟೆಂಟ್ ಹಾಕಿ ಬಿಡಾರ ಹೂಡುವ ಮೂಲಕ ಚೀನಾಗೆ ತಿರುಗೇಟು ನೀಡಿದ್ದಾರೆ.
ಸೇನಾ ಪಡೆಗಳನ್ನು ಭಾರತ ವಾಪಸ್ ಕರೆಸಿಕೊಳ್ಳುವವರೆಗೂ ಭಾರತದೊಂದಿಗೆ ಯಾವುದೇ ರೀತಿಯ ಮಾತುಕತೆ ನಡೆಸುವುದಿಲ್ಲ ಎಂದು ಚೀನಾ ಈ ಹಿಂದೆ ಸ್ಪಷ್ಟಪಡಿಸಿತ್ತು. ಮತ್ತೊಂದೆಡೆ ಚೀನಾ ಸರ್ಕಾರದ ಮುಖವಾಣಿ ಪತ್ರಿಕೆಗಳೂ ಕೂಡ ಭಾರತವನ್ನು ಬೆದರಿಸುವ ಪ್ರಯತ್ನಗಳನ್ನು ಮಾಡಿತ್ತು.
ಅಗತ್ಯ ಬಿದ್ದರೆ ಸೇನಾ ಬಲ ಬಳಸಿ ಡೋಕ್ಲಾಮ್ ಪ್ರದೇಶವನ್ನು ವಶಕ್ಕೆ ಪಡೆದುಕೊಳ್ಳಲು ಚೀನಾ ಹಿಂದೂ ಮುಂದು ನೋಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದವು.
ಈ ಎಲ್ಲಾ ಬೆದರಿಕೆಗಳ ಹೊರತಾಗಿಯೂ ಭಾರತೀಯ ಯೋಧರು ಟೆಂಟ್ ಗಳನ್ನು ಕಟ್ಟಿ ಡೋಕ್ಲಾಮ್ ಪ್ರದೇಶದಲ್ಲಿ ಬಿಡಾರ ಹೂಡುವ ಮೂಲಕ ಸೆಡ್ಡು ಹೊಡೆದಿದ್ದಾರೆ. ತನ್ನ ಮೂಲಕ ಚೀನಾ ಯೋಧರು ಡೋಕ್ಲಾಮ್ ನಿಂದ ಕದಲುವವರೆಗೂ ತಾವೂ ಕಾಲ್ತೆಗೆಯುವುದಿಲ್ಲ ಎಂಬ ಸಂದೇಶವನ್ನು ಈ ಮೂಲಕ ರವಾನಿಸಿದ್ದಾರೆ.
ಡೋಕ್ಲಾಮ್ ಗಡಿಯಲ್ಲಿ ಬಿಡಾರ ಹೂಡಿರುವ ಭಾರತೀಯ ಯೋಧರಿಗೆ ನಿರಂತರವಾಗಿ ಆಹಾರ ಹಾಗೂ ಮತ್ತಿತರ ಅವಶ್ಯ ವಸ್ತುಗಳನ್ನು ಪೂರೈಕೆ ಮಾಡಲಾಗುತ್ತಿದೆ ಈ ಮೂಲಕ ಚೀನಾದ ಯಾವುದೇ ಒತ್ತಡ ಹಾಗೂ ಬೆದರಿಕೆಗಳಿಗೆ ಮಣಿಯದಿರಲು ಭಾರತ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಭಾರತ, ಚೀನಾ, ಭೂತಾನ್ ಗಡಿಗಳ ಸಂಗಮದಂತಹ ಸ್ಥಳದಲ್ಲಿ ಡೋಕ್ಲಾಮ್ ಇದ್ದು, ಅದು ತನಗೇ ಸೇರಿದ್ದು ಎಂದು ಚೀನಾ ವಾದಿಸುತ್ತಿರುವುದರಿಂದ ವಿವಾದ ಭುಗಿಲೆದ್ದಿದೆ.