
ನವದೆಹಲಿ: ಚೀನಾದೊಂದಿಗಿನ ಗಡಿ ವಿವಾದ ಮುಂದುವರೆದಿರುವಂತೆಯೇ ಇತ್ತ ಚೀನಾಗೆ ತಿರುಗೇಟು ನೀಡಿರುವ ಭಾರತ ವಿವಾದಿತ ಗಡಿಯಲ್ಲಿ ಹೆಚ್ಚುವರಿ ಸೈನಿಕರನ್ನು ನಿಯೋಜಿಸಿದೆ.
ಮೂಲಗಳ ಪ್ರಕಾರ ಸಿಕ್ಕಿಂನ ಗಡಿ ಭಾಗದಲ್ಲಿ ಚೀನಾ ಸೇನೆಯು ತನ್ನ ಸೈನಿಕರನ್ನು ನಿಯೋಜಿಸಿದ ಬೆನ್ನಲ್ಲೇ ಭಾರತ ಕೂಡ ತನ್ನ ಸೈನಿಕರನ್ನು ವಿವಾದಿತ ಗಡಿಯಲ್ಲಿ ನಿಯೋಜಿಸುವ ಮೂಲಕ ಚೀನಾದ ಬೆದರಿಕೆ ತಂತ್ರಕ್ಕೆ ಹೆದರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.
ಆಂಗ್ಲ ಪತ್ರಿಕೆಯೊಂದು ವರದಿ ಮಾಡಿರುವಂತೆ ಭಾರತ ತನ್ನ ಗಡಿಭಾಗದಲ್ಲಿ ಪಹರೆಗಾಗಿ ಇಂದು ಮತ್ತೆ 2500 ಸೈನಿಕರನ್ನು ಈ ಭಾಗದಲ್ಲಿ ನಿಯೋಜಿಸಿದ್ದು, ಆ ಮೂಲಕ ಚೀನಾದ ಯಾವುದೇ ರೀತಿಯ ಬೆದರಿಕೆ ತಂತ್ರಗಳನ್ನು ಎದುರಿಸಲು ತಾನು ಸಿದ್ಧವಾಗಿದ್ದೇನೆ ಎಂಬ ಸಂದೇಶವನ್ನು ರವಾನಿಸಿದೆ. ಅಂತೆಯೇ ಲಡಾಕ್ ನಿಂದ ಅರುಣಾಚಲಪ್ರದೇಶವರೆಗಿನ ವಾಸ್ತವ ನಿಯಂತ್ರಣ ರೇಖೆಯ 4,057 ಕಿ.ಮೀ. ಉದ್ದಕ್ಕೂ ಹೈಅಲರ್ಟ್ ಘೋಷಣೆ ಮಾಡಲಾಗಿದ್ದು, ಸಿಕ್ಕಿಂ ಗಡಿಯಲ್ಲಿ ಶಾಂತಿ ಪಾಲನೆಗಾಗಿ ಮತ್ತೆ 2500 ಸೈನಿಕವನ್ನು ನಿಯೋಜಿಸಲಾಗಿದೆ ಎಂದು ತಿಳಿದುಬಂದಿದೆ.
ಚೀನಾ ಸಹ ಸಿಕ್ಕಂ ಹಾಗೂ ಭೂತಾನ್ ಗಡಿಭಾಗದಲ್ಲಿ ಬರುವ ಚುಂಬಿ ಕಣಿವೆಯ ಖಾಂಬಾ ಡಜಾಂಗ್ ಪ್ರದೇಶದಲ್ಲಿ ತನ್ನ ಸೇನಾ ತುಕಡಿಗಳನ್ನು ನಿಯೋಜಿಸಿದೆ ಎಂದು ಹೇಳಲಾಗುತ್ತಿದೆ. ಇನ್ನು ಸಿಕ್ಕಿಂನ ಡೊಕ್ಲಾಂ ಗಡಿ ಭಾಗದಲ್ಲಿ ಭಾರತ ಹಾಗೂ ಚೀನಾದ 300-400 ತುಕಡಿಗಳು ಪರಸ್ಪರರನ್ನು ಪಹರೆ ಮಾಡುತ್ತಿವೆ. ಭಾರತೀಯ ಸೇನೆ ಈ ಭಾಗದ ವಿಭಾಗ 17 ರಿಂದ 27 ರವರೆಗೂ ಅಂದರೆ ಹ್ಯಾಂಗ್ ಟಕ್ ಪ್ರಧಾನ ಕಛೇರಿಯಿಂದ ಕಾಲಿರಿಪಾಂಗ್ ವರೆಗೆ ತಲಾ 10 ಸಾವಿರ ಸೈನಿಕರನ್ನು ಒಳಗೊಂಡ ಸೇನೆ ಹೊಂದಿದ್ದು, ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಈ ಸೇನೆ ಸಿದ್ಧಗೊಂಡಿವೆ.
ಇದರೊಂದಿಗೆ ಪೂರ್ವ ಸಿಕ್ಕಿಂನಲ್ಲಿ 63 ಮತ್ತು 112 ಬ್ರಿಗೇಡ್ ಗಳನ್ನು ನಿಯೋಜಿಸಲಾಗಿದ್ದು, ಇದರ ಜೊತೆಗೆ ಉತ್ತರ ಸಿಕ್ಕಿಂನಲ್ಲಿ 3 ಸಾವಿರ ತುಕಡಿಗಳನ್ನು ನಿಯೋಜಿಸಲಾಗಿದೆ. ಅಂತೆಯೇ ಜುಲಕ್ ಮತ್ತೆ ನಾತಾಂಗ್ ಕಣಿವೆ ಭಾಗದಲ್ಲಿ 2 ಬೆಟಾಲಿಯನ್ ಗಳನ್ನು ನಿಯೋಜಿಸಲಾಗಿದೆ ಎಂದು ತಿಳಿದುಬಂದಿದೆ.
Advertisement