ಜಹೀರ್ ಖಾನ್ ಹೊರತಾಗಿಯೂ ಭರತ್ ಅರುಣ್ ಗಾಗಿ ಬೇಡಿಕೆ ಇಟ್ಟ ರವಿಶಾಸ್ತ್ರಿ!

ಬೌಲಿಂಗ್ ಕೋಚ್ ಆಗಿ ನೇಮಕವಾಗಿರುವ ಜಹೀರ್ ಖಾನ್ ಹೊರತಾಗಿಯೂ ತಮಗೆ ಭರತ್ ಅರುಣ್ ಅವರು ಬೇಕು ಎಂದು ಟೀಂ ಇಂಡಿಯಾ ನೂತನ ಕೋಚ್ ರವಿಶಾಸ್ತ್ರಿ ಬೇಡಿಕೆ ಇಟ್ಟಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬೈ: ಬೌಲಿಂಗ್ ಕೋಚ್ ಆಗಿ ನೇಮಕವಾಗಿರುವ ಜಹೀರ್ ಖಾನ್ ಹೊರತಾಗಿಯೂ ತಮಗೆ ಭರತ್ ಅರುಣ್ ಅವರು ಬೇಕು ಎಂದು ಟೀಂ ಇಂಡಿಯಾ ನೂತನ ಕೋಚ್ ರವಿಶಾಸ್ತ್ರಿ ಬೇಡಿಕೆ ಇಟ್ಟಿದ್ದಾರೆ.

ಟೀಂ ಇಂಡಿಯಾಗೆ ಫುಲ್ ಟೈಮ್ ಬೌಲಿಂಗ್ ಕೋಚ್ ಒಬ್ಬರ ಅಗತ್ಯವಿದ್ದು, ಪ್ರಸ್ತುತ ಕ್ರಿಕೆಟ್ ಸಲಹಾ ಸಮಿತಿ ನೇಮಕ ಮಾಡಿರುವ ಜಹೀರ್ ಖಾನ್ ಫುಲ್ ಟೈಮ್ ಬೌಲಿಂಗ್ ಕೋಚ್ ಆಗಿ ಸೇವೆ ಸಲ್ಲಿಸಲು ಸಾಧ್ಯವಿಲ್ಲ, ವರ್ಷದಲ್ಲಿ  250 ದಿನಗಳ ಕಾಲ ಕೆಲಸ ಮಾಡಲು ಜಹೀರ್ ಖಾನ್ ರಿಂದ ಸಾಧ್ಯವಿಲ್ಲ ಎಂದು ಹೇಳಿರುವ ರವಿಶಾಸ್ತ್ರಿ, ಇದೇ ಕಾರಣಕ್ಕೆ ಭರತ್ ಅರುಣ್ ರನ್ನು ಬೌಲಿಂಗ್ ಕೋಚ್ ಆಗಿ ನೇಮಕ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ ಎಂದು  ತಿಳಿದುಬಂದಿದೆ.

ಇನ್ನು ಬಿಸಿಸಿಐ ಮೂಲಗಳ ಪ್ರಕಾರ ಜಹೀರ್ ಖಾನ್ ರನ್ನು ಬೌಲಿಂಗ್ ಕೋಚ್ ಆಗಿ ಕ್ರಿಕೆಟ್ ಸಲಹಾ ಸಮಿತಿ ಸದಸ್ಯರು ನೇಮಕ ಮಾಡಿದ್ದಾರೆಯಾದರೂ, ವೇತನ ವಿಚಾರಕ್ಕೆ ಸಂಬಂಧಿಸಿದಂತೆ ಇನ್ನೂ ಪೂರ್ಣ ಪ್ರಮಾಣದ ಚರ್ಚೆ  ನಡೆದಿಲ್ಲ. ಹೀಗಾಗಿ ಜಹೀರ್ ಖಾನ್ ಬೌಲಿಂಗ್ ಕೋಚ್ ಆಗಿ ಮುಂದುವರೆಯುವುದು ಕಷ್ಟ ಸಾಧ್ಯ ಎಂದು ಹೇಳಲಾಗುತ್ತಿದೆ. ಇನ್ನು ಈ ಹಿಂದೆ ಕೋಟ್ ಆಗಿ ನೇಮಕವಾಗಿದ್ದ ರವಿಶಾಸ್ತ್ರಿ ಅವರು ಕ್ರಿಕೆಟ್ ಸಲಹಾ ಸಮಿತಿ ಸದಸ್ಯರಾದ  ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಹಾಗೂ ವಿವಿಎಸ್ ಲಕ್ಷ್ಮಣ್ ರೊಂದಿಗೆ ಚರ್ಚೆ ನಡೆಸುವಾಗ ತಮಗೆ ಬೌಲಿಂಗ್ ಕೋಚ್ ಆಗಿ ಭರತ್ ಅರುಣ್ ಬೇಕು ಎಂದು ವಾದಿಸಿದ್ದರು. ಇದಕ್ಕೆ ಸಿಎಸಿಯ ಓರ್ವ ಸದಸ್ಯ ಪ್ರಬಲ ವಿರೋಧ  ವ್ಯಕ್ತಪಡಿಸಿದ್ದರು. ಈ ವೇಳೆ ರವಿಶಾಸ್ತ್ರಿ ಭರತ್ ಅರುಣ್ ಸಾಧ್ಯವಾಗದಿದ್ದರೆ ಜೇಸನ್ ಗಿಲ್ಲೆಸ್ಪಿಯನ್ನು ನೀಡಿ ಎಂದು ವ್ಯಂಗ್ಯವಾಗಿ ಕೇಳಿದ್ದರಂತೆ.

ತಾಂತ್ರಿಕವಾಗಿ ಜೇಸನ್ ಗಿಲ್ಲೆಸ್ಪಿ ಅವರನ್ನು ಬೌಲಿಂಗ್ ಕೋಚ್ ಆಗಿ ನೇಮಕ ಮಾಡುವುದು ಸಾಧ್ಯವಿಲ್ಲ ಎಂದು ರವಿಶಾಸ್ತ್ರಿ ಅವರಿಗೆ ತಿಳಿದಿದ್ದರೂ, ಸಿಎಸಿ ಸದಸ್ಯರಿಗೆ ಟಾಂಗ್ ನೀಡುವ ಉದ್ದೇಶದಿಂದ ಹೀಗೆ ಕೇಳಿದ್ದರು ಎಂದು  ಹೇಳಲಾಗುತ್ತಿದೆ. ಪ್ರಸ್ತುತ ಆಸ್ಟ್ರೇಲಿಯಾದ ಮಾಜಿ ಬೌಲರ್ ಗಿಲ್ಲೆಸ್ಪಿ ಪಪುವಾ ನ್ಯೂಗಿನಿಯಾ ಕ್ರಿಕೆಟ್ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇನ್ನು ಸಿಎಸಿ ಕೂಡ ಪರ್ಯಾಯ ಆಯ್ಕೆ ಇಟ್ಟುಕೊಂಡಿದ್ದು, ಮಾಜಿ ಬೌಲಿಂಗ್ ಕೋಚ್ ವೆಂಕಟೇಶ್ ಪ್ರಸಾದ್ ಅವರನ್ನು ಪರ್ಯಾಯ ಆಯ್ಕೆಯಾಗಿರಿಸಿಕೊಳ್ಳಲಾಗಿತ್ತು. ಒಂದು ವೇಳೆ ಜಹೀರ್ ಖಾನ್ ಅಲಭ್ಯರಾದರೆ ವೆಂಕಟೇಶ್  ಪ್ರಸಾದ್ ಗೆ ಅವಕಾಶ ನೀಡಲು ಸಿಎಸಿ ಸದಸ್ಯರು ನಿರ್ಧರಿಸಿದ್ದರು ಎಂದು ಹೇಳಾಗುತ್ತಿದೆ.

ಇದೀಗ ಮತ್ತೆ ಭರತ್ ಅರುಣ್ ಅವರನ್ನೇ ಬೌಲಿಂಗ್ ಕೋಚ್ ಆಗಿ ನೇಮಕ ಮಾಡಬೇಕು ಎಂದು ರವಿಶಾಸ್ತ್ರಿ ಪಟ್ಟು ಹಿಡಿದಿದ್ದು, ಮತ್ತೆ ವಿವಾದಕ್ಕೆ ಕಾರಣವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com